ಭಾರತದಲ್ಲಿ ಅಕಾಲಿಕ ಮರಣದ ಪ್ರಮಾಣ ಹೆಚ್ಚು : ವಿಶ್ವ ಆರೋಗ್ಯ ಸಂಸ್ಥೆ
ಜಿನೆವಾ, ಗುರುವಾರ, 15 ಸೆಪ್ಟೆಂಬರ್ 2011( 18:40 IST )
ಭಾರತದಲ್ಲಿ ಅಕಾಲಿಕ ಮರಣದ ಸಂಖ್ಯೆ ಅತ್ಯಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ. ಹೃದಯ ಮತ್ತು ರಕ್ತ ಸಂಬಂಧಿ ಕಾಯಿಲೆಗಳಿಂದಾಗಿಯೇ ಅತ್ಯಧಿಕ ಸಾವು ಸಂಭವಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೃದಯ ಸಂಬಂಧಿ ರೋಗ, ಕ್ಯಾನ್ಸರ್, ಉಸಿರಾಟದ ತೊಂದರೆ, ರಕ್ತದೊತ್ತಡದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಜನರೇ ಹೆಚ್ಚಾಗಿ ಅಕಾಲಿಕ ಮರಣಕ್ಕೀಡಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಂಬಾಕಿನ ಬಳಕೆ, ಮಿತಿಮೀರಿದ ಮದ್ಯಪಾನ, ದೈಹಿಕ ಅಶಕ್ತತೆ ಹಾಗೂ ಅಪೌಷ್ಟಿಕ ಆಹಾರ ಸೇವನೆ ಮೊದಲಾದ ಕಾರಣಗಳಿಂದಾಗಿ ವಿಶ್ವಾದ್ಯಂತ ನಡೆಯುವ ಅಕಾಲಿಕ ಸಾವಿನ ಪ್ರಮಾಣ ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕ ಅಲಾ ಅಲ್ವಾನ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ನಂತರ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಾಯುವವರ ಸಂಖ್ಯೆ ಭಾರತದಲ್ಲೇ ಅತ್ಯಧಿಕವಾಗಿದ್ದು, ದಕ್ಷಿಣ ಏಷ್ಯಾದಲ್ಲೇ ಅಕಾಲಿಕ ಸಾವಿಗೆ ತುತ್ತಾಗುವವರ ಸಂಖ್ಯೆ ಶೇ. 38ರಷ್ಟಾಗಿದ್ದು, ಈ ಪೈಕಿ 60 ವರ್ಷದೊಳಗಿನ ಮಹಿಳೆಯರ ಸಾವಿನ ಸಂಖ್ಯೆ 32.1ರಷ್ಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.