ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಬೂಲ್ ರಾಯಭಾರ ಕಚೇರಿ ದಾಳಿ ಹಿಂದೆ ಐಎಸ್ಐ ಕೈವಾಡ (Kabul | US Embassy attack | ISI | Barack Obama | International News in Kannada)
ಕಾಬೂಲ್ ರಾಯಭಾರ ಕಚೇರಿ ದಾಳಿ ಹಿಂದೆ ಐಎಸ್ಐ ಕೈವಾಡ
ವಾಷಿಂಗ್ಟನ್, ಶನಿವಾರ, 17 ಸೆಪ್ಟೆಂಬರ್ 2011( 18:30 IST )
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿದೆ ಎಂದು ಅಮೆರಿಕ ಶಂಕಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಭದ್ರತಾ ಇಲಾಖೆ ಅಧಿಕಾರಿಗಳು ಐಎಸ್‌ಐ ದುಷ್ಕೃತ್ಯ ನಡೆಸುತ್ತಿರುವ ಹಕ್ಕಾನಿ ಉಗ್ರರಿಗೆ ಸಹಕಾರ ಮತ್ತು ಆಶ್ರಯ ನೀಡುತ್ತಿರುವುದು ತಿಳಿದು ಬಂದಿದೆ. ಅಮೆರಿಕ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ 27ಜನರು ಮೃತಪಟ್ಟಿದ್ದು, ಈ ದುಷ್ಕೃತ್ಯದ ಹಿಂದೆಯೂ ಐಎಸ್‌ಐ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ದಾಳಿ ನಡೆದ ಒಂದು ಗಂಟೆಯೊಳಗಾಗಿಯೇ ಐಎಸ್‌ಐ ಕೈವಾಡ ಇರುವುದು ಸ್ಪಷ್ಟವಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿದರು ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಅಫ್ಘಾನಿಸ್ತಾನದಿಂದ ಅಮೆರಿ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಂಡಿರುವುದು ಹಾಗೂ ಅಮೆರಿಕ-ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿರುವುದರಿಂದಾಗಿ ಐಎಸ್‌ಐ ಹಕ್ಕಾನಿ ಉಗ್ರಗಾಮಿ ಸಂಘಟನೆ ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ದುಷ್ಕೃತ್ಯಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.
ಅಮೆರಿಕದ ಈ ಆಪಾದನೆಯ ಕುರಿತು ಐಎಸ್‌ಐ ಅಥವಾ ಪಾಕಿಸ್ತಾನ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಾಲ್‌ಸ್ಟ್ರಿಟ್ ಜರ್ನಲ್ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ಅಧಿಕಾರಿಗಳು ತೇಜೋವಧೆ ಮಾಡುವ ನಿಟ್ಟನಲ್ಲಿ ಮಾಡಲಾಗಿರುವ ಈ ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.