ಇಸ್ಲಾಮಾಬಾದ್, ಸೋಮವಾರ, 19 ಸೆಪ್ಟೆಂಬರ್ 2011( 19:24 IST )
ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ವಿವಾಹ ನೋಂದಣಿ ಮಾಡಿಸಲು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಪ್ರಸ್ತಾಪಿತ ಹಿಂದೂ ವಿವಾಹ ಕಾಯ್ದೆ ಕರಡು ಮಸೂದೆ 2008 ಸಂಸತ್‌ನಲ್ಲಿ ಮಂಡನೆಗೆ ವಿಳಂಬವಾಗುತ್ತಿರುವುದೇ ಇದಕ್ಕೆ ಕಾರಣ.
ಪಾಕಿಸ್ತಾನದಾದ್ಯಂತ ಇರುವ ಅಲ್ಪ ಸಂಖ್ಯಾತರಾಗಿರುವ 40 ಲಕ್ಷ ಹಿಂದೂಗಳು ಅನುಭವಿಸುತ್ತಿರುವ ತೊಂದರೆಗೆ ಪ್ರಸ್ತಾಪಿತ ಹಿಂದೂ ವಿವಾಹ ಕಾಯ್ದೆಯು ದಶಕಗಳ ಸಮಸ್ಯೆಗೆ ಪರಿಹಾರ ನೀಡಲಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್ ಹಾಗೂ ಬಹಾಯಿ ಸಮುದಾಯದವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸಲು ಯಾವುದೇ ವ್ಯವಸ್ಥೆಯಿರಲಿಲ್ಲ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿವಾಹ ಪ್ರಮಾಣ ಪತ್ರವಿಲ್ಲದೇ ತೀವ್ರ ತೊಂದರೆ ಅನುಭವಿಸಬೇಕಾಗುತ್ತಿತ್ತು ಎಂದು ಸಂಸದ ಆರೈಶ್ ಕುಮಾರ್ ಹೇಳಿದ್ದಾರೆ.
ವಿವಾಹ ನೋಂದಣಿ ವಿಷಯದಲ್ಲಿ ಸರಕಾರದ ವಿರುದ್ಧ ಹೋರಾಡಲು ಇದು ಸೂಕ್ತ ಸಮಯವಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಈ ಮಸೂದೆ ಕರಡು ಅಂಗೀಕಾರವಾದರೆ ಹಿಂದೂಗಳೂ ಸಹ ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತಿನ ಚೀಟಿ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಲ್ಲಿ ಸರಕಾರವು ವಿಚ್ಛೇಧನಕ್ಕೆ ಅವಕಾಶ ಕಲ್ಪಿಸಿರುವುದು ವಿವಾದಕ್ಕೆ ಎಡೆ ಮಾಡಿದೆ. ಹಿಂದೂ ಸಮುದಾಯದಲ್ಲಿ ವಿಚ್ಛೇಧನಕ್ಕೆ ಅವಕಾಶವೇ ಇಲ್ಲದಿರುವಾಗ ಸರಕಾರ ಈ ಕಲಂ ಅನ್ನು ಹೇಗೆ ಸೇರಿಸಿದೆ ಎಂದು ಕುಮಾರ್ ಪ್ರಶ್ನಿಸಿದ್ದಾರೆ.
ಸಂಸತ್ ಮುಂದಿರುವ ಹಿಂದೂ ವಿವಾಹ ಕಾಯ್ದೆ ಕಲಂ 13ರಲ್ಲಿ ವಿವಾಹ ವಿಚ್ಛೇಧನಕ್ಕೆ ಅವಕಾಶ ನೀಡಲಾಗಿದ್ದು, ಹಿಂದೂ ಸಮುದಾಯಕ್ಕೆ ಯಾವುದೇ ವ್ಯಕ್ತಿ ಯಾವುದೇ ಕ್ಷಣದಲ್ಲಾದರೂ ಯಾವುದೇ ನ್ಯಾಯಾಲಯದಲ್ಲಾದರೂ ವಿಚ್ಛೇಧನ ನೀಡಬಹುದು.
ಪ್ರಸ್ತಾಪಿತ ವಿಚ್ಛೇಧನ ಕಾಯ್ದೆಯಲ್ಲಿ ಹಲವಾರು ಷರತ್ತುಗಳನ್ನೂ ಹಾಕಲಾಗಿದೆ. ಈ ಕರಡು ಮಸೂದೆಯು ಯಾವುದೇ ನ್ಯಾಯಾಲಯವು ಕಾನೂನು ಬದ್ಧವಾಗಿ ವಿಚ್ಛೇಧನ ನೀಡಲು ಅವಕಾಶ ಕಲ್ಪಿಸಲಾಗಿದೆ.
ಇನ್ನಿತರೆ ನಿಯಮಗಳನ್ನು ಈ ಕರಡಿನಲ್ಲಿ ಸೇರಿಸಲಾಗಿದ್ದು, ವಿಚ್ಛೇಧನ ಪಡೆದವರು ಮರುಮದುವೆಯಾಗಬಹುದು. ವಿಚ್ಛೇಧಿತರ ಮಕ್ಕಳನ್ನು ಪಡೆಯುವ ಕಾನೂನು ಬದ್ಧ ಹಕ್ಕು, ಬಹುಪತ್ನಿತ್ವಕ್ಕೆ ಹಾಗೂ ಕಾಯ್ದೆಯ ಇನ್ನಿತರೆ ನಿಯಮ ಉಲ್ಲಂಘನೆಗೆ ನೀಡುವ ಶಿಕ್ಷೆಯ ಕುರಿತೂ ಪ್ರಸ್ತಾಪಿಸಲಾಗಿದೆ.
ವಿಚ್ಛೇಧನ ಪಡೆಯುವ ಸಂದರ್ಭದಲ್ಲಿ ಸಂಕೀರ್ಣ ವಿಷಯಗಳಾದ ಮಕ್ಕಳ ಮೇಲಿನ ಹಕ್ಕು, ಆಸ್ತಿ ಹಾಗೂ ಮಾಲೀಕತ್ವದ ಹಕ್ಕು ಮೊದಲಾದ ವಿಷಯಗಳ ಬಗ್ಗೆಯೂ ಈ ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಲ್ಪ ಸಂಖ್ಯಾತರರ ವ್ಯವಹಾರಗಳ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀ ಸಾಮರಸ್ಯ ಖಾತೆ ಸಚಿವ ಅಕ್ರಂ ಮಾಸಿಹ್ ಗಿಲ್, ಹಿಂದೂ ವಿವಾಹ ಕಾಯ್ದೆ ಸಂಸತ್‌ನಲ್ಲಿ ಅಂಗೀಕಾರವಾಗಲು ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ವಿವಾಹ ವಿಚ್ಛೇಧನ ಕಲಂ ಸರಕಾರ ಮತ್ತು ಹಿಂದೂಗಳ ನಡುವೆ ಸಂಪರ್ಕ ಸಾಧನವಾಗಿದೆ ಎಂದು ಹೇಳಿದ್ದಾರೆ.
ಹಿಂದೂ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಪಡೆದೇ ತಾವು ಹಿಂದೂ ವಿವಾಹ ಕಾಯ್ದೆಯ ಕರಡನ್ನು ರಚಿಸುವಾಗ ಹಿಂದೂ ಸಮುದಾಯದ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿರುವ ಸಚಿವ ಅಕ್ರಂ ಮಾಸಿಹ್ ಗಿಲ್, ವಿವಾಹ ನೋಂದಣಿ ಕಾಯ್ದೆಯನ್ನು ಎಲ್ಲ ಅಲ್ಪ ಸಂಖ್ಯಾತ ಸಮುದಾಯಗಳಿಗೂ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಕರಾಚಿಯಲ್ಲಿರುವ ಹಿಂದೂ ಪಂಚಾಯಿತಿ ಮುಖಂಡರ ಅಭಿಪ್ರಾಯ ಪಡೆದೇ ಮಸೂದೆ ಕರಡು ರಚಿಸಿರುವುದಾಗಿ ತಿಳಿಸಿದ್ದಾರೆ. ನಗರ್ ಪಾರ್ಕರ್ ಮತ್ತು ರಹೀಂ ಯಾರ್ ಖಾನ್ ಅವರು ಭಾರತ ಹಿಂದೂ ವಿವಾಹ ಕಾಯ್ದೆಯನ್ನು ಮಾದರಿಯಾಗಿಟ್ಟುಕೊಂಡು ಈ ಕಾಯ್ದೆಯ ಕರಡನ್ನು ರಚಿಸಿದ್ದಾರೆ.
ಹಿಂದೂ ವಿವಾಹ ಮಸೂದೆ ಕಾಯ್ದೆಯನ್ನೂ ಸಿಖ್ ಸಮುದಾಯಕ್ಕೂ ಅನ್ವಯಿಸುತ್ತಿರುವುದು ಆ ಸಮುದಾಯದ ಮುಖಂಡರನ್ನು ಕೆರಳಿಸಿದೆ.
ವಿವಾಹದ ಸಂಪ್ರದಾಯದಲ್ಲಿ ಹಿಂದೂಗಳಿಗೂ ಹಾಗೂ ತಮಗೂ ಅಜಗಜಾಂತರ ವ್ಯತ್ಯಾಸವಿದ್ದು, ಒಂದೇ ಕಾಯದೆಯನ್ನು ಎರಡು ಸಮುದಾಯಗಳಗೂ ಹೇಗೆ ಅನ್ವಯಿಸಲಾಗುತ್ತದೆ ಎಂದು ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಹಿರಿಯ ಸದಸ್ಯ ಸ್ವರಣ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಅಕ್ರಂ ಮಾಸಿಹ್ ಗಿಲ್, ಅಲ್ಪ ಸಂಖ್ಯಾತರಾಗಿರುವ ಸಿಖ್ ಹಾಗೂ ಬಹಾಯಿ ಸಮುದಾಯದವರಿಗೂ ಪ್ರತ್ಯೇಕ ವಿವಾಹ ಕಾಯ್ದೆಯನ್ನು ರಚಿಸುವುದಾಗಿ ಹೇಳಿದ್ದಾರೆ. ವಿವಾಹ ಕಾಯ್ದೆ ಕರಡಿನ ಕುರಿತು ಚರ್ಚಿಸಲು ಸಂಸದರು ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.