ವಾಷಿಂಗ್ಟನ್, ಮಂಗಳವಾರ, 20 ಸೆಪ್ಟೆಂಬರ್ 2011( 18:02 IST )
ತಮ್ಮ ದೇಶದ ದಕ್ಷಿಣ ಸಮುದ್ರ ತೀರದಲ್ಲಿ ಭಾರತ ಸೇರಿದಂತೆ ಯಾವುದೇ ದೇಶಗಳ ಹಡಗು ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾಗಿರುವ ಅಮೆರಿಕ ಹಾಗೂ ಜಪಾನ್ ದೇಶಗಳು ಈ ಕುರಿತು ಚರ್ಚಿಸಲು ಮುಂದಾಗಿವೆ.
ವಿಶ್ವ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರು ಜಪಾನ್ ವಿದೇಶಾಂಗ ಸಚಿವ ಕೋಯಿಚಿರೋ ಗೆಂಬಾ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರ ತೀರದ ವಿವಾದದ ಹಿನ್ನೆಲೆಯಲ್ಲಿ ಏಷ್ಯಾ ಶಾಂತಿ ಸಾಗರದಲ್ಲಿ ಬೇರೆ ದೇಶಗಳ ಹಡಗುಗಳ ಸಂಚಾರದ ಸ್ವಾತಂತ್ರ್ಯದ ಕುರಿತೂ ಹಿಲರಿ ಕ್ಲಿಂಟನ್ ಹಾಗೂ ಕೋಯಿಚಿರೋ ಗೆಂಬಾ ಅವರು ಪ್ರಮುಖವಾಗಿ ಚರ್ಚಿಸಿದ್ದು, ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲು ನಿರ್ಧರಿಸಿದ್ದಾಗಿ ಅಧಿಕಾರಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಜಪಾನಿನ ನೂತನ ಪ್ರಧಾನಿ ನೊಡಾಯೋಶಿಹಿಕೋ ಅವರನ್ನು ನ್ಯೂಯಾರ್ಕ್‌ನಲ್ಲಿ ಮುಂದಿನವಾರ ಭೇಟಿ ಮಾಡಲಿದ್ದು, ನ್ಯೂ ಸಿಲ್ಕ್ ರೋಡ್ ಕುರಿತ ಬಗ್ಗೆಯೂ ಒಬಾಮಾ ಚರ್ಚಿಸಲಿದ್ದಾರೆ. ದಕ್ಷಿಣ ಮಧ್ಯ ಏಷ್ಯಾದ ಆರ್ಥಿಕ ಸೌಹಾರ್ದತೆ ಕಾಪಾಡುವಲ್ಲಿ ಜಪಾನ್ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಅಮೆರಿಕ ನಂಬಿದೆ ಎಂದು ಕ್ಲಿಂಟನ್ ತಿಳಿಸಿದ್ದರು.