ಉಗ್ರರಿಗೆ ನೆರವು ನಿಲ್ಸಿ,ಇಲ್ಲದಿದ್ರೆ ದಾಳಿ ಎದುರಿಸಿ: ಪಾಕ್‌ಗೆ ಅಮೆರಿಕ
ವಾಷಿಗ್ಟನ್, ಗುರುವಾರ, 22 ಸೆಪ್ಟೆಂಬರ್ 2011( 12:41 IST )
ಉಗ್ರರಿಗೆ ನೆರವು ನೀಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ ಇದು ಅಮೆರಿಕ ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆ. ಅಮೆರಿಕ ನಡೆಸುವ ಉಗ್ರರ ವಿರುದ್ಧ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತಲೇ ಇನ್ನೊಂದೆಡೆ ಅಮೆರಿಕ ಸೇನಾ ಪಡೆಗಳ ವಿರುದ್ಧ ಹೋರಾಡುತ್ತಿರುವ ಹಕ್ಕಾನಿ ನೆಟ್ ವರ್ಕ್ ಮೊದಲಾದ ಉಗ್ರಗಾಮಿ ಸಂಘಟನೆಗಳಿಗೆ ಒಳಗೊಳಗೇ ಪಾಕಿಸ್ತಾನದ ಐಎಸ್‌ಐ ನಡೆಸುತ್ತಿರುವ ಒಳಸಂಚು ಅಮೆರಿಕವನ್ನು ಇನ್ನಷ್ಟು ಕೆರಳಿಸಿದೆ.
ಇತ್ತೀಚೆಗೆ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಹಕ್ಕಾನಿ ನೆಟ್‌ವರ್ಕ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿರುವುದರಿಂದ ಅಮೆರಿಕ ಕೆಂಡಾಮಂಡಲವಾಗಿದ್ದು, ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರಿಗೆ ಮೂರೂವರೆ ಗಂಟೆಗಳ ಕಾಲ ಪಾಠ ಮಾಡಿದ ಅಮೆರಿಕ ಭಯೋತ್ಪಾದಕರ ಪರ ಮೃದು ಧೋರಣೆ ತಳೆಯದಂತೆ ತಾಕೀತು ಮಾಡಿದೆ. ಸೇನಾ ಮುಖ್ಯಸ್ಥ ಪರ್ವೇಜ್ ಅಶ್ಪಾಕ್ ಕಯಾನಿ ಹಾಗೂ ಐಎಸ್‌ಐ ಮುಖ್ಯಸ್ಥ ಅಹಮದ್ ಶುಜಾ ಪಾಶಾ ಅವರೊಂದಿಗೂ ಮಾತುಕತೆ ನಡೆಸಿದ ಅಮೆರಿಕ ಅಧಿಕಾರಿಗಳು ಭಯೋತ್ಪಾದಕರಿಗೆ ಪರೋಕ್ಷವಾಗಿ ಸಹಕಾರ ನೀಡುವುದನ್ನು ಮುಂದುವರಿಸಿದರೆ ತಮ್ಮ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ನೀವು ಭಯೋತ್ಪಾದನೆಗೆ ವಿರುದ್ಧವಾಗಿದ್ದರೆ ಭಯೋತ್ಪಾದಕ ಸಂಘಟನೆಗಳ ವಿರೂದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ ಅವರು ಪೆಂಟಾಗನ್‌ನಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ಕಟುವಾದ ಶಬ್ದದಲ್ಲಿ ಹೇಳಿದ್ದಾರೆ.
ಹಕ್ಕಾನಿ ಸಂಘಟನೆಯ ಉಗ್ರರು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸಿ ಸುರಕ್ಷಿತ ಸ್ಥಳ (ಪಾಕಿಸ್ತಾನ)ದಲ್ಲಿ ಮರೆಯಾಗುತ್ತಿರುವುದು ಸಹಿಸಲಾಗುವುದಿಲ್ಲ. ಉಗ್ರರನ್ನು ಮಟ್ಟಹಾಕಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಅಮೆರಿಕ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.
ಈ ಕುರಿತು ವರದಿ ಪ್ರಕಟಿಸಿದ ವಾಷಿಂಗ್ಟನ್ ಪೋಸ್ಟ್, ಪಾಕಿಸ್ತಾನವು ತಮ್ಮ ಆದೇಶವನ್ನು ಪಾಲಿಸುತ್ತಿಲ್ಲ ಎಂಬುದು ಅಮೆರಿಕದ ಅಧಿಕಾರಿಗಳಿಗೆ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕವು ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪಾಕ್ ವಿರುದ್ಧ ಕಠಿಣ ನಿಲುವು ತಳೆದಿದೆ ಎಂದು ತಿಳಿಸಿದೆ.
ಕಳೆದ ವಾರ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಐಎಸ್‌ಐ ಬೆಂಬಲಿತ ಹಕ್ಕಾನಿ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯ ಕುರಿತು ಪ್ರಸ್ತಾಪಿಸಿದ ಅಮೆರಿಕ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ, ಈ ದುಷ್ಕೃತ್ಯವು ಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಈ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ ಆದರೆ ಈ ರೀತಿಯ ದುಷ್ಕೃತ್ಯಗಳು ನಡೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಕ್ಯಾಮರೂನ್ ಹಂಟರ್, ಹಕ್ಕಾನಿ ನೆಟ್‌ವರ್ಕ್ ಜೊತೆ ಪಾಕಿಸ್ತಾನಕ್ಕೆ ನಂಟು ಇರುವುದರ ಕುರಿತು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡಿದ್ದು ನಿಜವೇ ಆದಲ್ಲಿ ಸಣ್ಣ ಕಾರಣದ ಆಧಾರದ ಮೇಲೆ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ಬೆಂಬಲಿಸುವ ರಾಷ್ಟ್ರ ಎಂದು ಘೋಷಿಸುವುದಿಲ್ಲ. ಆದರೆ ಈ ರೀತಿಯ ಅಪಾಯದಿಂದ ಪಾಕಿಸ್ತಾನವನ್ನು ಪಾರು ಮಾಡಲು ಅಮೆರಿಕ ಕಡೇ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗಿದೆ.