ಇಸ್ಲಾಮಾಬಾದ್, ಶನಿವಾರ, 24 ಸೆಪ್ಟೆಂಬರ್ 2011( 20:02 IST )
ಅಮೆರಿಕ ಸೇನಾ ಪಡೆಯ ಹಿರಿಯ ಕಮಾಂಡರ್ ಜೇಮ್ಸ್ ಮಾಟಿಸ್ ಶನಿವಾರ ಪಾಕಿಸ್ತಾನಕ್ಕೆ ಬಂದಿಳಿದಿದ್ದು, ಪಾಕಿಸ್ತಾನ ಸೇನೆಯ ಮುಖ್ಯಾಧಿಕಾರಿ ಅಶ್ಪಾಕ್ ಪರ್ವೇಜ್ ಕಯಾನಿ ಅವರೂ ಸೇರಿದಂತೆ ಹಿರಿಯ ಸೇನಾ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕ ಸಂಘಟನೆ ಹಕ್ಕಾನಿ ನೆಟ್‌ವರ್ಕ್ ನಡೆಸಿದ್ದ ದಾಳಿಗೆ ಐಎಸ್‌ಐ ಕುಮ್ಮಕ್ಕು ನೀಡಿದ್ದೇ ಕಾರಣ ಎಂದು ಅಮೆರಿಕ ಆಪಾದಿಸಿತ್ತು ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉಂಟಾಗಿದ್ದ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿ ಸೇನಾಧಿಕಾರಿಯ ಭೇಟಿ ಪ್ರಾಮುಖ್ಯತೆ ಪಡೆದಿದೆ.
ಅಮೆರಿಕ ಸೇನಾಪಡೆಯ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥರಾಗಿರುವ ಜೆನ್ ಮಾಟಿಸ್ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯ ನೇತೃತ್ವ ವಹಿಸಿದ್ದು, ಕಳೆದ ಮೂರು ತಿಂಗಳೊಳಗಾಗಿ ಪಾಕಿಸ್ತಾನಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ. ಮಾಟ್ಟಿಸ್ ಕಳೆದ ಜುಲೈನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಮಾಟ್ಟಿಸ್ ಅವರು ಪಾಕಿಸ್ತಾನದ ಸೇನಾ ಮುಖಂಡ ಜನರಲ್ ಕಯಾನಿ ಮತ್ತು ಪಾಕಿಸ್ತಾನದ ಇತರೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನದಲ್ಲಿರುವ ಉತ್ತರ ವಜೀರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಮೆರಿಕ ಆಪಾದಿಸಿತ್ತು. ಹಕ್ಕಾನಿ ನೆಟ್‌ವರ್ಕ್ ಜೊತೆಗೆ ಯಾವುದೇ ನಂಟು ಹೊಂದಿರುವ ಕುರಿತು ಮಾಡಲಾಗಿದ್ದ ಆಪಾದನೆಯನ್ನು ಪಾಕಿಸ್ತಾನ ನಿರಾಕರಿಸಿತ್ತು. ಏತನ್ಮಧ್ಯೆ ಹಕ್ಕಾನಿ ನೆಟ್‌ವರ್ಕ್ ಗ್ರೂಪ್‌ನ ಮುಖಂಡ ಸಿರಾಜುದ್ದೀನ್ ಹಕ್ಕಾನಿ ತಾನು ಅಫ್ಘಾನಿಸ್ತಾನಕ್ಕಿಂತಲೂ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದ.
ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಹಕ್ಕಾನಿ ನೆಟ್‌ವರ್ಕ್ ಹಾಗೂ ಪಾಕಿಸ್ತಾನ ಮೂಲದ ಇತರೆ ಉಗ್ರಗಾಮಿ ಸಂಘಟನೆಗಳ ವಿರುದ್ಧ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ ಎಚ್ಚರಿಸಿದ್ದರು.
ಹಕ್ಕಾನಿ ನೆಟ್‌ವರ್ಕ್ ಮೊದಲಾದ ಉಗ್ರಗಾಮಿ ಸಂಘಟನೆಗಳ ಜೊತೆ ಪಾಕಿಸ್ತಾನ ನಂಟು ಹೊಂದಿದೆ ಎಂಬ ಆಪಾದನೆಯನ್ನು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹಾಗೂ ಸೇನಾ ಮುಖ್ಯಸ್ಥ ಕಯಾನಿ ಸೇರಿದಂತೆ ಆ ದೇಶದ ಎಲ್ಲ ಹಿರಿಯ ಮುಖಂಡರೂ ನಿರಾಕರಿಸಿದ್ದರು. ಪಾಕಿಸ್ತಾನದ ಜನರ ಭಾವನೆಗೆ ಧಕ್ಕೆ ತರುವಂತಹಾ ಹೇಳಿಕೆಗಳನ್ನೂ ನೀಡಬಾರದು ಎಂದು ಅವರು ಅಮೆರಿಕವನ್ನು ಒತ್ತಾಯಿಸಿದ್ದರು.
ಅಮೆರಿಕದ ಆಪಾದನೆ ಹಾಗೂ ಬೆದರಿಕೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ನಡೆಸುವುದಾಗಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿದೆ ಎಂದು ಅಮೆರಿಕ ಆಪಾದಿಸಿರುವ ಹಿನ್ನೆಲೆಯಲ್ಲಿ ಸಂಸತ್ ವಿಶೇಷ ಅಧಿವೇಶನ ಕರೆಯುವ ಮೂಲಕ ಅಮೆರಿಕದೊಂದಿಗಿನ ಸಂಬಂಧದ ಕುರಿತು ಪರಾಮರ್ಶಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂಸತ್ ಅಧಿವೇಶನವನ್ನು ಅಕ್ಟೋಬರ್ 3 ರಮದು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.