ಉಗ್ರಗಾಮಿ ಸಂಘಟನೆ ಹುಟ್ಟುಹಾಕಿದ್ದೇ ಅಮೆರಿಕ:ಪಾಕ್ ತಿರುಗೇಟು
ಇಸ್ಲಾಮಾಬಾದ್, ಸೋಮವಾರ, 26 ಸೆಪ್ಟೆಂಬರ್ 2011( 14:12 IST )
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಹಕ್ಕಾನಿ ನೆಟ್‌ವರ್ಕ್‌ಗೆ ಪಾಕಿಸ್ತಾನ ಸಕಲ ನೆರವು ನೀಡುತ್ತಿದೆ ಎಂದು ಅಮೆರಿಕ ಮಾಡಿದ್ದ ಆಪಾದನೆಗೆ ತಿರುಗೇಟು ನೀಡಿರುವ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಹುಟ್ಟು ಹಾಕಿದ್ದೇ ಅಮೆರಿಕ ಗುಪ್ತಚರ ಸಂಸ್ಥೆ (ಸಿಐಎ) ಎಂದು ಆಪಾದಿಸಿದೆ.
ತಮ್ಮ ದೇಶದ ವಿರುದ್ಧ ಅಮೆರಿಕ ಮಾಡುತ್ತಿರುವ ಆಪಾದನೆಯಿಂದ ಕೆಂಡಾಮಂಡಲವಾಗಿರುವ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ತಾಲಿಬಾನ್ ಉಗ್ರಗಾಮಿ ಸಂಘಟನೆಯ ಅಂಗವಾಗಿರುವ ಹಕ್ಕಾನಿ ನೆಟ್‌ವರ್ಕ್ ಉಗ್ರಗಾಮಿ ಸಂಘಟನೆಗೆ ಉತ್ತಮ ತರಬೇತಿ ನೀಡಿದ್ದೇ ಸಿಐಎ ಸಂಘಟನೆ ಎಂದು ಆಪಾದಿಸಿದ್ದಾರೆ. ಅಲ್ಲದೇ ಹಕ್ಕಾನಿ ನೆಟ್‌ವರ್ಕ್ ಪಾಕ್ ಮೊದಲ ಸಂಘಟನೆಯಲ್ಲ, 20 ವರ್ಷದ ಹಿಂದೆ ನಡೆದ ಘಟನೆಯ ಬಗ್ಗೆ ಹೇಗೆ ಮಾತನಾಡಬೇಕು ಎಂಬುದೂ ಸಹ ಅಮೆರಿಕಕ್ಕೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
1980ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಸೋವಿಯತ್ ಒಕ್ಕೂಟದ ಪಡೆಗಳ ವಿರುದ್ಧ ನಡೆದ ಹೋರಾಟದಲ್ಲಿ ಸಿಐಎಗೆ ಪಾಕಿಸ್ತಾನ ನೆರವು ನೀಡಿತ್ತು ಎಂದು ಮಲಿಕ್ ತಿಳಿಸಿದ್ದಾರೆ.
ಹಕ್ಕಾನಿ ನೆಟ್‌ವರ್ಕ್ ಉಗ್ರಗಾಮಿ ಸಂಘಟನೆ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಘಟನೆ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸುತ್ತಿರುವವರು ಸೂಕ್ತ ಸಾಕ್ಷ್ಯಾಧಾರ ನೀಡಲಿ ಎಂದು ಸವಾಲೆಸೆದಿದೆ. ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದು, ನಮ್ಮ ಸೇನಾಪಡೆ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮಹಮದ್ ಬುಟಕಟ್ಟು ಪ್ರದೇಶದ ಮೇಲೆ ನಡೆದ ದಾಳಿಯ ಬಗ್ಗೆ ಸಿಐಎ ಅಥವಾ ಅಫ್ಘಾನಿಸ್ತಾನವನ್ನು ಪಾಕಿಸ್ತಾನವು ನಿಂದಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಉಗ್ರಗಾಮಿ ಸಂಘಟನೆಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಕಟ್ಟು ನಿಟ್ಟಾಗಿ ತಪಾಸಣೆ ನಡೆಸಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನ ಸರಕಾರವು ಉಗ್ರಗಾಮಿಗಳನ್ನು ಮಟ್ಟಹಾಕಲು ಬದ್ಧವಾಗಿದ್ದು, ದೇಶದ ಹೊರನಿಂದಾಗಲಿ ಅಥವಾ ದೇಶದೊಳಗೆ ನಡೆಯುವ ಕಿಡಿಗೇಡಿ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಲಿಕ್ ಹೇಳಿದ್ದಾರೆ. ಅಲ್ಲದೇ ಪಾಕಿಸ್ತಾನದ ಸಾರ್ವ ಭೌಮತ್ವದ ಬಗ್ಗೆ ಯಾರೊಂದಿಗೂ ರಾಜೀಮಾಡಿಕೊಳ್ಳಲು ಸಾಧ್ಯವಿಲ್ಲ. ಉಗ್ರರ ವಿರುದ್ಧ ಸಮರ ಸಾರಿರುವ ಪಾಕಿಸ್ತಾನ ಸೇನೆ ಹಾಗೂ ಕಾನೂನು ಜಾರಿ ನಿರ್ದೇಶನಾಲಯವು ಯಾವುದೇ ಸವಾಲನ್ನು ಎದುರಿಸಲೂ ಸಿದ್ಧವಾಗಿದೆ ಎಂದು ಹೇಳಿದ್ದಾರೆ.