ನ್ಯೂಯಾರ್ಕ್ , ಮಂಗಳವಾರ, 27 ಸೆಪ್ಟೆಂಬರ್ 2011( 09:11 IST )
ಉಗ್ರಗಾಮಿ ಸಂಘಟನೆ ಹಕ್ಕಾನಿ ನೆಟ್‌ವರ್ಕ್ ಜೊತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಂಟು ಹೊಂದಿರುವುದನ್ನು ಅಮೆರಿಕ ಗುರುತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಉಗ್ರಗಾಮಿ ಸಂಘಟನೆಗಳ ಜೊತೆ ನಂಟು ಹೊಂದಿರುವ ಬಗ್ಗೆ ನಾವು ಹಲವಾರು ಬಾರಿ ಹೇಳಿದ್ದೆವು. ಸ್ವತಃ ಐಎಸ್‌ಐನಿಂದ ತೊಂದರೆಗೊಳಗಾಗಿರುವ ಅಮೆರಿಕ ಈಗ ಈ ಅಂಶವನ್ನು ಬಹಿರಂಗಪಡಿಸಿರುವುದು ಶ್ಲಾಘನೀಯ ಎಂದು ಭಾರತ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಚೀನಾ ಮೊದಲಾದ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ಎಸ್.ಎಂ. ಕೃಷ್ಣ, ಭಾರತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಎಂಬುದು ಹಲವಾರು ದಿನಗಳ ಬೇಡಿಕೆಯಾಗಿದ್ದು, ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಗಳಿಸುವ ಕುರಿತು ತಮಗೆ ವಿಶ್ವಾಸವಿದೆ ಎಂದು ಕೃಷ್ಣ ಹೇಳಿದ್ದಾರೆ.