ರಾಜಕೀಯ: ವಾರದ ವಿಶ್ಲೇಷಣೆ ರಾಷ್ಟ್ರಮಟ್ಟದಲ್ಲಿ ಇದು ಗದ್ದಲ ನಿರ್ಮಿಸಿದ ವಾರ. ಈ ವಾರವಿಡೀ ತೀರ್ಪುಗಳದೇ ಸರಣಿ ಸಂದಣಿ. ಮಹತ್ವದ ಎರಡು ಸರಣಿ ಸ್ಫೋಟಗಳ ತೀರ್ಪು, ಇನ್ನಿತರ ನ್ಯಾಯನಿರ್ಣಯಗಳಿಂದಾಗಿ ಆಗಸ್ಟ್ 10ರಂದು ಜರುಗಲಿರುವ ಉಪರಾಷ್ಟ್ರಪತಿ ಆಯ್ಕೆ ಚುನಾವಣೆ ಜನಮಾನಸದಲ್ಲಿ ಮಸುಕಾಗಿದೆ.
ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಟಾಡಾ ನ್ಯಾಯಾಲಯ ಅಂತಿಮ ತೀರ್ಪು ಘೋಷಿಸಿ ಕಲಾಪ ಮುಗಿಸಿದ್ದರೆ, ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದಲ್ಲಿ ಮದನಿಯನ್ನು ಬಿಡುಗಡೆಗೊಳಿಸಿ ಸಿಬಿಐ ನ್ಯಾಯಾಲಯ ಕಲಾಪ ಆರಂಭಿಸಿದೆ.
ಟಾಡಾ ವಿಶೇಷ ನ್ಯಾಯಾಲಯ ಹಾಗೂ ಸಿಬಿಐ ವಿಶೇಷ ನ್ಯಾಯಾಲಯ ಇತ್ಯಾದಿ ತೀರ್ಪುಗಳು ದೇಶಾದ್ಯಂತದ ಜನತೆ ಗಮನಸೆಳೆದು, ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿರುವುದರಿಂದ ಪ್ರಸ್ತುತ ಚರ್ಚೆಯಲ್ಲಿರ ಬೇಕಿದ್ದ ಮಹತ್ವದ ಉಪರಾಷ್ಟ್ರಪತಿ ಚುನಾವಣಾ ಪ್ರಕಿಯೆ ಮಸುಕಾಗಿದೆ.
ವಾಸ್ತವದಲ್ಲಿ ಅಲ್ಪಸಂಖ್ಯಾತ (ಮುಸ್ಲಿಂ)ಅಭ್ಯರ್ಥಿಯನ್ನು ದೇಶದ ಎರಡನೇ ಮಹತ್ವದ ಪರಮಾಧಿಕಾರಕ್ಕೆ ಆಯ್ಕೆಮಾಡುವ ಪ್ರಕ್ರಿಯೆಗೆ ವಿಶೇಷ ಮಹತ್ವ ವಿದೆ.
ದೇಶದಲ್ಲಿ ಪ್ರಥಮವಾಗಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಹುದ್ದೆಗೇರಿಸುವಷ್ಟೇ ಮಹತ್ವ, ಉಪರಾಷ್ಟ್ರಪತಿ ಪದವಿಯಂತಹ ಉನ್ನತಸ್ಥಾನದಲ್ಲಿ ಅಲ್ಪಸಂಖ್ಯಾತರು ದಮನಕ್ಕೊಳಗಾದವರ ಪ್ರಾತಿನಿಧ್ಯ ದೃಢೀಕರಿಸುವುದಕ್ಕೂ ಈ ಜಾತ್ಯತೀತ ರಾಷ್ಟ್ರದಲ್ಲಿ ಮಹತ್ವವಿದೆ.
ಇದರಂತೆಯೇ ಉಪರಾಷ್ಟ್ರಪತಿ ಚುನಾವಣೆಗಾಗಿ ಮೂರು ರಾಜಕೀಯ ಒಕ್ಕೂಟಗಳೂ ಮುಸ್ಲೀಂ ಅಲ್ಪ ಸಂಖ್ಯಾತ ವಿಭಾಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ಎನ್ಡಿಎ ನೆಜ್ಮಾ ಹೆಪ್ತುಲ್ಲಾ,ಕಾಂಗ್ರೆಸ್ ಯುಪಿಎ ಹಮೀದ್ ಅನ್ಸಾರಿ, ತೃತೀಯ ರಂಗ ಯುಎನ್ಪಿಎಯಿಂದ ರಶೀದ್ ಮಸೂದ್ ಇದೀಗ ಸ್ಪರ್ಧಾ ಕಣದಲ್ಲಿದ್ದಾರೆ.
ಉಪ ರಾಷ್ಟ್ರಪತಿಯಂತಹ ಪ್ರಧಾನ ಚುನಾವಣಾ ವಿಷಯ ಮಸುಕಾಗಿಸುವಂತೆ, ನ್ಯಾಯಾಲಯಗಳ ತೀರ್ಪು ಗಮನಸೆಳೆದಿರುವುದು ಗಮನಾರ್ಹ ಅಂಶ.
|