ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಲ್ಬಣಗೊಳ್ಳುತ್ತಿರುವಂತೆಯೇ, ತನ್ನ ಮರಾಠಿ ಮಿತ್ರಪಕ್ಷಕ್ಕೆ ಬೆಂಬಲ ನೀಡಿರುವ ಮಹಾರಾಷ್ಟ್ರ ಬಿಜೆಪಿ, ಕರ್ನಾಟಕದ ಮರಾಠೀ-ಭಾಷಿಗರ ಪ್ರದೇಶಗಳನ್ನು ಮಹಾರಾಷ್ಟ್ರ ಜೊತೆ ವಿಲೀನಗೊಳಿಸಬೇಕು ಎಂದು ಹೇಳಿ, ಕರ್ನಾಟಕದ ಆಡಳಿತಾರೂಢ ಪಕ್ಷಕ್ಕೆ ಇರಿಸುಮುರಿಸುಂಟು ಮಾಡಿದೆ.ಗಡಿಯ ಮರಾಠೀ ಭಾಷಿಗ ಪ್ರದೇಶಗಳು ಮಹಾರಾಷ್ಟ್ರದೊಂದಿಗೆ ಸೇರ್ಪಡೆಯಾಗಬೇಕು ಎಂಬುದು ರಾಜ್ಯ ಬಿಜೆಪಿಯ ಸ್ಪಷ್ಟ ನಿಲುವು ಎಂದು ಮಂಗಳವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ.ಇದನ್ನೂ ಓದಿ: ಭಾಷೆಯ ಹೆಸರಲ್ಲಿ ದ್ವೇಷದ ಬೀಜ ಬಿತ್ತುವ ಎಂಇಎಸ್ ಮಹಾರಾಷ್ಟ್ರ ರಚನೆಯಾಗಿ 50 ವರ್ಷಗಳಾಗಿವೆ. ಆದರೆ ಗಡಿ ವಿವಾದವಿನ್ನೂ ಪರಿಹಾರವಾಗಿಲ್ಲ. ರಾಜ್ಯ ಮತ್ತು ಕೇಂದ್ರಗಳಲ್ಲಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದರೂ, ಈ ವಿವಾದಕ್ಕೆ ಪರಿಹಾರ ಕಂಡು ಹುಡುಕಲಾಗಲೇ ಇಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ.ಗಡಿಭಾಗದ ಮರಾಠೀ ಭಾಷಿಗರ ಬೇಡಿಕೆಯನ್ನು ಬಿಜೆಪಿಯು ಸಕ್ರಿಯವಾಗಿ ಬೆಂಬಲಿಸುತ್ತದೆ ಎಂದು ನಿರ್ಣಯ ಹೇಳಿದೆ. ಈ ಹೇಳಿಕೆಗೆ ಕರ್ನಾಟಕದ ಆಡಳಿತಾರೂಢ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.ಜನವರಿ 16ರಂದು ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಒಂಬತ್ತು ದಿನಗಳ ಕರ್ನಾಟಕ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಗದ್ದಲವೆಬ್ಬಿಸಿ, ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿತ್ತು. ಕಳೆದ ವಾರದಿಂದೀಚೆಗೆ ಈ ವಿವಾದವು ಹಿಂಸಾರೂಪಕ್ಕೆ ತಿರುಗಿದ್ದು, ಉಭಯ ರಾಜ್ಯಗಳ ವಾಹನಗಳು ಬೆಂಕಿಗೆ ತುತ್ತಾಗುತ್ತಿವೆ ಮತ್ತು ಎರಡೂ ರಾಜ್ಯಗಳ ನಡುವೆ ಸರಕಾರಿ ಬಸ್ಸುಗಳ ಓಡಾಟವೂ ಸ್ಥಗಿತಗೊಂಡಿದೆ. |