ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಅವಿನಾಶ್ ಬಿ.
WD
ಇದು ಅತಿಯಾಯಿತು. ಕೆಟ್ಟ ಮೇಲೂ ಬುದ್ಧಿ ಬಾರದಿದ್ದರೆ ಅದಕ್ಕೆ ತಕ್ಕ ಶಾಸ್ತಿಯಾಗಲೇಬೇಕು. ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲುಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಎಂಬ ಕರ್ನಾಟಕ ವಿರೋಧಿ ಸಮಿತಿಯು, ಈಗಾಗಲೇ ತನ್ನ ಆಂತರಿಕ ಒಡಕಿನಿಂದ ಕುಲಗೆಟ್ಟು ಹೋಗುತ್ತಿದ್ದರೂ, ರಾಜ್ಯವನ್ನು ಒಡೆಯಬೇಕು, ಉಭಯ ರಾಜ್ಯಗಳ ನಡುವೆ ಅಶಾಂತಿಯ ವಾತಾವರಣ ಸೃಷ್ಟಿಸಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಭಾಷೆಯ ಹೆಸರಿನಲ್ಲಿ ದ್ವೇಷದ ಕಿಚ್ಚು ಹಚ್ಚಲು ಹೊರಟಿದೆ. ಕನ್ನಡಿಗರ ಸ್ವಾಭಿಮಾನವನ್ನು ಮತ್ತೆ ಕೆದಕಲು ಹೊರಟಿದೆ.

ಪ್ರಜಾಪ್ರಭುತ್ವ ಸರಕಾರಕ್ಕೇ ಸವಾಲೊಡ್ಡುವಷ್ಟರ ಮಟ್ಟಕ್ಕೆ ಈ ಸಣ್ಣ ಸಂಘಟನೆಯೊಂದು ಸಣ್ಣತನ ಮೆರೆಯುತ್ತಲೇ ಬಂದು ತಲುಪಿದೆ ಎಂದರೆ ಅವರ ಮನಸ್ಥಿತಿ ಎಷ್ಟರ ಮಟ್ಟಿಗಿದೆ ಎಂಬುದು ಅರಿವಿಗೆ ಬಂದೀತು. ಆಂತರಿಕ ಗೊಂದಲಗಳಿಂದ ಹೊರಬರುವುದಕ್ಕೆ ಹೆಣಗಾಡುತ್ತಿರುವ ಅದು, ಆಗಾಗ್ಗೆ ತನ್ನ ಪುಂಡಾಟಿಕೆಯ ಕ್ರಮಗಳಿಂದಾಗಿ ಜನರೆದುರು ನಗೆಪಾಟಲಿಗೀಡಾಗುತ್ತಿದ್ದರೂ, ಇಲ್ಲಿ ಗಲಭೆಯ ಕಿಡಿ ಹೊತ್ತಿಸಲು, ಅಂಥವರನ್ನೇ ಕರೆಸುವ ಸಂಚು ನಡೆಸಿತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ. ಇಡೀ ದೇಶದ ಏಕತೆಗೇ ಧಕ್ಕೆ ತಂದೊಡ್ಡಿರುವ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಕರೆಸಲು ಯೋಜಿಸಿದ್ದೂ ಅದೇ ಕಾರಣಕ್ಕಾಗಿ- ಆತ ಬಂದಲ್ಲಿ, ತನ್ನ ಹರಿತ ನಾಲಿಗೆಯ ಮೂಲಕ, ಭೀಷಣ ಭಾಷಣದ ಮೂಲಕ ಜನರನ್ನು ಕೆರಳಿಸಿ, ಶಾಂತಿಗೆ ಬೆಂಕಿ ಹಚ್ಚಿ ಹೋಗುತ್ತಾರೆ ಎಂಬುದು ಯಾರಿಗೂ ಅರ್ಥವಾಗದ ಸಂಗತಿಯೇನಲ್ಲ.

ಬೆಳಗಾವಿ, ಕಾರವಾರ, ಖಾನಾಪುರ, ನಿಪ್ಪಾಣಿ ಮುಂತಾಗಿ ಕರ್ನಾಟಕದ ಸುಮಾರು 856 ನಗರಗಳು, ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡುತ್ತಿರುವ ಎಂಇಎಸ್, ಕರ್ನಾಟಕದ ಶಕ್ತಿ ಕೇಂದ್ರವಾದ ಸರಕಾರವೇ ಬೆಳಗಾವಿಗೆ ಬಂದು ಅಧಿವೇಶನ ಮಾಡುತ್ತಿರುವುದರಿಂದ ಉಡುಪಿನೊಳಗೆ ಇರುವೆ ಬಿಟ್ಟುಕೊಂಡಂತೆ ಆಡುತ್ತಿದೆ. ಈ ಕಾರಣಕ್ಕಾಗಿಯೇ ಅದು 'ಮಹಾ ಮೇಳಾವ' ಎಂಬ ಮರಾಠಿಗರ ಸಮಾವೇಶ ನಡೆಸಲು ಸಿದ್ಧವಾಗಿದ್ದು. ವಿಧಾನಮಂಡಲದ ಅಧಿವೇಶನಕ್ಕೆ ಸೆಡ್ಡು ಹೊಡೆದು ಸಮಾವೇಶ ನಡೆಸಲು ಇಂಥ ಧಾರ್ಷ್ಟ್ಯ ಅವರಿಗೆ ಬಂದದ್ದಾದರೂ ಎಲ್ಲಿಂದ? ಮಹಾರಾಷ್ಟ್ರದ ಸೋ ಕಾಲ್ಡ್ "ಮರಾಠಿಗರ ರಕ್ಷಣೆಯ ನೇತಾರರು" ಎಂದು ಹೇಳಿಕೊಳ್ಳುತ್ತಿರುವವರ ಚಿತಾವಣೆಯೇ ಅಲ್ಲವೇ? ಇಲ್ಲವಾದಲ್ಲಿ, ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದ, ಮಹಾರಾಷ್ಟ್ರದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದ ಎನ್.ಡಿ.ಪಾಟೀಲ, ಪರ ರಾಜ್ಯಕ್ಕೆ ಬಂದು ಪುಂಡಾಟ ಮಾಡುತ್ತಿರುವವರಿಗೆ ಕುಮ್ಮಕ್ಕು ಕೊಡುತ್ತಿದ್ದರೇ? ದಶಕಗಳಷ್ಟು ಹಳೆಯ ಈ ಗಡಿ ವಿವಾದಕ್ಕೆ ಇನ್ನು ಕೂಡ ಪರಿಹಾರ ದೊರೆಯದಿರುವುದಕ್ಕೆ ಇಂಥ ಓಟ್ ಬ್ಯಾಂಕ್ ರಾಜಕಾರಣ, ಭಾಷಾಂಧತೆಗಳೇ ಕಾರಣ ಎಂಬುದಂತೂ ಇಲ್ಲಿ ಸ್ಪಷ್ಟವಾಗುತ್ತಿದೆ.

ತಮ್ಮ ರಾಜ್ಯದಿಂದ ಬಿಹಾರಿಗಳನ್ನು, ಉತ್ತರ ಭಾರತೀಯರನ್ನು ಒದ್ದೋಡುತ್ತಿಸುತ್ತಿದ್ದವರು ಇದೀಗ, ಕರ್ನಾಟಕದ ಅನ್ನ ತಿಂದು "ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಿ" ಎಂದು ವ್ಯರ್ಥಾಲಾಪ ಮಾಡುತ್ತಿರುವವರ ಮೇಲೆ 'ದೌರ್ಜನ್ಯ ನಡೆಯುತ್ತಿದೆ, ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ, ಯಡಿಯೂರಪ್ಪ ಸರಕಾರ ಮರಾಠಿಗರ ತಲೆ ಒಡೆಯುತ್ತಿದೆ' ಎಂದು ಹುಯಿಲೆಬ್ಬಿಸುತ್ತಿರುವುದು ವಿಪರ್ಯಾಸವಲ್ಲವೇ? ಈ ಹಿಂದೆಯೂ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆದಾಗಲೂ ಮೈಪರಚಿಕೊಂಡಿದ್ದ ಈ ಎಂಇಎಸ್, ತದನಂತರ ಬೆಳಗಾವಿ ಮಹಾನಗರ ಪಾಲಿಕೆಯ ಹಿಡಿತ ಕಳೆದುಕೊಂಡರೂ, ವಿಧಾನ ಸಭೆ ಚುನಾವಣೆಯಲ್ಲಿ ಜನತೆಯಿಂದ ಪಾಠ ಹೇಳಿಸಿಕೊಂಡು ಎರಡನೇ ಆಘಾತ ಅನುಭವಿಸಿದರೂ, ಬುದ್ಧಿ ಕಲಿತಂತೆ ತೋರುತ್ತಿಲ್ಲ.

2008ರ ಮೇ ತಿಂಗಳಲ್ಲಿ ಚುನಾವಣೆಯಲ್ಲಿ ಎಂಇಎಸ್‌ನ ಬೆಳಗಾವಿ ಶಾಸಕರಾಗಿದ್ದ ಮನೋಹರ ಕಿಣೇಕರ್ ಮತ್ತು ಖಾನಾಪುರ ಶಾಸಕ ದಿಗಂಬರ ಪಾಟೀಲ ಅವರನ್ನು ಹೆಸರಿಲ್ಲದಂತೆ ಜನರು ತಿರಸ್ಕರಿಸಿ, ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದರು. ಮನೋಹರ ಕಿಣೇಕರ್ ಕ್ಷೇತ್ರದಲ್ಲಂತೂ 73 ಸಾವಿರ ಮರಾಠಿಗರಿದ್ದಾರೆ ಎಂದು ಹೇಳಿಕೊಳ್ಳಲಾಗುತ್ತಿದ್ದರೂ, ಎಂಇಎಸ್‌ಗೆ ಇಲ್ಲಿ ದೊರೆತ ಮತಗಳು 10 ಸಾವಿರಕ್ಕೂ ಕಡಿಮೆ! ಅಂದರೆ ಜನರು ಭಾಷಾ ರಾಜಕೀಯವನ್ನು ತಿರಸ್ಕರಿಸಿ ಅಭಿವೃದ್ಧಿ ಬಯಸಿ ಪ್ರೌಢಿಮೆ ಮೆರೆದಿದ್ದರು. ಮರಾಠಿಗರೇ ಹೆಚ್ಚಾಗಿರುವ ಬೆಳಗಾವಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನ ಗೆದ್ದುಕೊಳ್ಳಲು ಮತ್ತು ಇದ್ದ ಸ್ಥಾನ ಉಳಿಸಿಕೊಳ್ಳಲೂ ಎಂಇಎಸ್ ವಿಫಲವಾಗಿರುವುದು ಅದರ ರಾಜ್ಯ ಒಡೆಯುವ ರಾಜಕೀಯಕ್ಕೆ ಸ್ಥಳೀಯರು ನೀಡಿದ ದಿಟ್ಟ ಉತ್ತರ.

ಭಾಷೆಯ ಹೆಸರಿನಲ್ಲಿ ಜನರ ಮನಸ್ಸು ಒಡೆಯುವುದು, ಅಶಾಂತಿ ಮೂಡಿಸುವುದು ಅಕ್ಷಮ್ಯ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದೊಂದೇ ಅವರ ಏಕೈಕ ಉದ್ದೇಶವೆಂಬುದು ಜನರಿಗೆ ತಿಳಿದಿದೆ. ಇಷ್ಟಾದರೂ "ನಾವು ಮರಾಠಿಗರ ಹಿತರಕ್ಷಕರು" ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವವರು ಬದಲಾಗುವ ಲಕ್ಷಣಗಳು ತೋರುತ್ತಿಲ್ಲ.

ಗಡಿ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುತ್ತಿರುವ ಇದೇ ಎಂಇಎಸ್ ಕಾರ್ಯಕರ್ತರು, ನಮ್ಮದೇ ರಾಜ್ಯದ ಸರಕಾರಿ ಬಸ್ಸುಗಳಿಗೆ, ಪೊಲೀಸ್ ಜೀಪುಗಳಿಗೆ ಕಲ್ಲೆಸೆಯುತ್ತಾರೆ. ಬ್ಯಾಂಕಿಗೆ ಕಲ್ಲೆಸೆಯುತ್ತಾರೆ. ಇವರ ಪುಂಡಾಟಿಕೆ ನಿಯಂತ್ರಿಸಲು ಪೊಲೀಸರು ಬೇರೆ ದಾರಿಗಾಣದೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದನ್ನೇ ಮಹಾರಾಷ್ಟ್ರದಲ್ಲಿ ಕುಳಿತ ನಾಯಕರು "ದನಕ್ಕೆ ಬಡಿದಂತೆ ಬಡಿದರು" ಎಂದು ಹುಯಿಲೆಬ್ಬಿಸಿದ್ದು. ಕಾನೂನು ಯಾರಿಗಾದರೂ ಒಂದೇ. ಬೆಳಗಾವಿಯಲ್ಲಿ ಎರಡನೇ ಬಾರಿಗೆ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದರೂ ಪಾಲಿಕೆ ಕಟ್ಟಡದಲ್ಲಿ ಕನ್ನಡ ಧ್ವಜವೇಕಿಲ್ಲ ಎಂದು ನ್ಯಾಯಬದ್ಧವಾಗಿ ಪ್ರಶ್ನಿಸಿದರೂ, ನಿಷೇಧಾಜ್ಞೆ ಸಂದರ್ಭದಲ್ಲಿ ಪ್ರತಿಭಟನೆಗಿಳಿದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ಬಣದ ಕಾರ್ಯಕರ್ತರನ್ನು ಚದುರಿಸಲೂ ಪೊಲೀಸರು ಲಾಠಿ ಬೀಸಿದ್ದರು. ಹಾಗಂತ, ಕನ್ನಡಿಗರ ಮೇಲೂ ಪೊಲೀಸರು ಪ್ರಾಣಿಗೆ ಬಡಿದಂತೆ ಬಡಿದಿದ್ದಾರೆ ಎಂದು ಹೇಳಿದರೆ ಹೇಗಾದೀತು?

ಖಾನಾಪುರದಲ್ಲಿ "ಮಹಾ ಮೇಳ" (ಮರಾಠಿಯಲ್ಲಿ ಮಹಾ ಮೇಳಾವ್) ನಡೆಸಲು ಸಿದ್ಧತೆಗಳಾಗಿದ್ದರೂ, ಅಲ್ಲಿನ ಜಿಲ್ಲಾಡಳಿತವು ಇದನ್ನು ನಿಷೇಧಿಸಿದೆ. ಹೀಗಾಗಿ ಬಂಧನದ ಭೀತಿಯಿಂದ ಅದರ ಮುಖಂಡರೇ ಒಂದೊಂದೇ ನೆಪ ಹೇಳಿ ಜಾರಿಕೊಂಡಿರುವುದು ಏಕೀಕರಣ ಸಮಿತಿಯ "ಏಕತೆ"ಯ ಬಲ ಎಷ್ಟಿದೆ ಎಂಬುದರ ಪ್ರತೀಕ. ಮೇಳಾವ್‌ಗೆ ಕುಮ್ಮಕ್ಕು ನೀಡುತ್ತಿದ್ದ ಮಾಜಿ ಶಾಸಕ ದಿಗಂಬರ ಪಾಟೀಲ, ವಸಂತರಾವ್ ಪಾಟೀಲ ಅವರು ಬೆಳಗಾವಿಯಲ್ಲಿ ಬಂಧನಕ್ಕೊಳಗಾಗುವ ಮೂಲಕ ಮೇಳಾವ್ ತಪ್ಪಿಸಿಕೊಂಡಿದ್ದರೆ, ಅವರ ಜತೆಗಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಜಿ ಸಚಿವ ವಿ.ವೈ.ಚವ್ಹಾಣ ಅವರಂತೂ ಅನಾರೋಗ್ಯದಿಂದ ಕೊಲ್ಲಾಪುರ ಸೇರಿದ್ದಾರೆ. ಹೀಗಾಗಿ ಖಾನಾಪುರದಲ್ಲಿ ಮೇಳಾವ್ ಬಗ್ಗೆ ಅಂಥ ಪ್ರತಿಕ್ರಿಯೆಯೇನೂ ಕಂಡುಬರಲಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿಯೂ ಅವರು ಸಮಾವೇಶ ನಡೆಸಿಯೇ ತೀರುತ್ತೇವೆ ಎಂದು ಹೊರಟಿರುವುದು ನೆಲದ ಕಾನೂನಿನ ಬಗ್ಗೆ ಎಂಇಎಸ್‌ನವರಿಗೆಷ್ಟು ಗೌರವವಿದೆ ಮತ್ತು ಅವರ ಉದ್ದೇಶವೇನು ಎಂಬುದನ್ನು ಬಟಾಬಯಲಾಗಿಸಿದೆ.

ಕನ್ನಡ ನಾಡೊಳಗೇ ಇದ್ದುಕೊಂಡು, ರಾಜ್ಯವನ್ನು ಒಡೀತೀವಿ ಎನ್ನೋ ದುಸ್ಸಾಹಸಕ್ಕೆ ಕೈಹಾಕಿರುವುದು ಎಂಇಎಸ್ ಇದೇ ಮೊದಲೇನಲ್ಲ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಬೆಳಗಾವಿಯಲ್ಲಿ ವಿಧಾನಸಭೆಯ ಪ್ರಥಮ ಅಧಿವೇಶನ ನಡೆದಾಗಲೂ ಎಂಇಎಸ್ ಇದೇ ರೀತಿ ಕೂಗಾಡಿತ್ತು. ಇತ್ತೀಚೆಗಷ್ಟೇ ಮುಂಬಯಿ ದಾಳಿ ಪ್ರಕರಣದಲ್ಲಿ ಅಸಂಬದ್ಧ ಹೇಳಿಕೆಗಳಿಗಾಗಿ ಉಪಮುಖ್ಯಮಂತ್ರಿ/ಗೃಹ ಸಚಿವ ಪಟ್ಟ ಕಳೆದುಕೊಂಡಿದ್ದ ಆರ್.ಆರ್.ಪಾಟೀಲ್ ಅಂದು ಅಲ್ಲಿಗೆ ಬಂದು, ತಮ್ಮ ಅದೇ ಅಸಂಬದ್ಧ ಹೇಳಿಕೆಗಳ ಮೂಲಕ ಹುಳಿ ಹಿಂಡಿ ಹೋಗಿದ್ದರು. ಈ ವರ್ಷವೂ ಆಗಿದ್ದು ಅದೇ, ರಾಮದಾಸ್ ಕದಂ ಎಂಬ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ನಮ್ಮ ನೆಲಕ್ಕೆ ಬಂದು, ಮುಂಬಯಿಯಲ್ಲಿ ಕನ್ನಡಿಗರನ್ನು ಬಿಡುವುದಿಲ್ಲ ಎಂಬ ಬೆಂಕಿ ಹಚ್ಚಿ ಹೋಗಿದ್ದಾರೆ. ಹೀಗಾಗಿ, ಕನ್ನಡ ಮಣ್ಣಿನಲ್ಲೇ ಮರಾಠೀ ಮೇಳಕ್ಕೆ ಅನುಮತಿ ಕೊಟ್ಟು, ಕನ್ನಡ ಮಕ್ಕಳಿಗೆ ಉಗೀರಿ ಅಂತ ಯಾರಾದರೂ ಹೇಳುತ್ತಾರೆಯೇ? ಸಾಧ್ಯವಿಲ್ಲದ ಮಾತು.

ಪ್ರತಿವರ್ಷ ನವೆಂಬರ್ 1ರಂದು ಇಡೀ ರಾಜ್ಯವೇ ರಾಜ್ಯೋತ್ಸವ ಸಡಗರದಲ್ಲಿದ್ದರೆ ಇದೇ ಎಂಇಎಸ್ ಅಂದು ಕರಾಳ ದಿನವನ್ನಾಗಿ ಆಚರಿಸುತ್ತಿದೆ. ಹೀಗಾಗಿ, ಸರಕಾರ ಈ ಬಗ್ಗೆ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳಬೇಕು. ಯಾವತ್ತಿಗೂ ರಾಜ್ಯ ಒಡೆಯುವ, ಭಾಷಾ ಸಾಮರಸ್ಯ ಕದಡುವ ಇಂಥ ಶಕ್ತಿಗಳಿಗೆ ಸೊಲ್ಲೆತ್ತಲು ಅವಕಾಶ ಕೊಡಲೇಬಾರದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ
ಅ'ಸತ್ಯಂ': ಚಿನ್ನದ ನವಿಲು ಈಗ ಕಾಗದದ ಹುಲಿ!
ದಾಳಿಗೊಂದು ತಿಂಗಳು: ಎಚ್ಚರಿಕೆ ನೀಡುತ್ತಲೇ ಇದೆ ಭಾರತ
ಸರಣಿ ತಿಪ್ಪರಲಾಗ: ಪಾಕಿಸ್ತಾನಕ್ಕೇನಾಗಿದೆ?
ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ
ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?