ಇದು ಆರಂಭವಾಗುವುದಕ್ಕೆ ಮೊದಲೇ ಮುಕ್ತಾಯವಾದ ಹನಿಮೂನ್ ಕಥಾನಕ. ಮದುವೆಯಾಗುವುದಕ್ಕಾಗಿ ಇಸ್ಲಾಂಗೆ ಮತಾಂತರಗೊಂಡ ಚಾಂದ್ ಮೊಹಮ್ಮದ್ ಅಲಿಯಾಸ್ ಚಂದ್ರಮೋಹನ್ ವಿರುದ್ಧ ಪ್ರೇಯಸಿ-ಎರಡನೇ ಪತ್ನಿ ಫಿಜಾ ಅಲಿಯಾಸ್ ಅನುರಾಧಾ ಬಾಲಿ ಸೋಮವಾರ ವಿಶ್ವಾಸದ್ರೋಹ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸುವ ಮೂಲಕ ಇವರಿಬ್ಬರ ವಿವಾಹ ಸಂಬಂಧ ಬೀದಿಗೆ ಬಿದ್ದಿದೆ.ತನಗೆ ಜೀವ ಬೆದರಿಕೆಯಿದೆ ಮತ್ತು ಆಪ್ತ ಸಹಾಯಕರ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿರುವ ಫಿಜಾ, ಇವನ್ನೆಲ್ಲಾ ನಿಮ್ಮೆದುರು ನಾಳೆ ಹೇಳುವುದಕ್ಕೆ ನಾನು ಉಳಿಯುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಸುದ್ದಿಗಾರರೆದುರು ಅಲವತ್ತುಕೊಂಡಿದ್ದಾರೆ.ಪೂರಕ ಓದು: ಹಳೇಯ ಹೆಂಡತಿ ಮನೆಗೆ ಹೋಗುವಾಸೆ: ಚಾಂದ್ ಹರ್ಯಾಣ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಹಿರಿಯ ಪುತ್ರ ಚಂದ್ರಮೋಹನ್ ಕಳೆದ ನವೆಂಬರ್ ತಿಂಗಳಲ್ಲಿ ರಹಸ್ಯವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಡಿಸೆಂಬರ್ ತಿಂಗಳಲ್ಲಿ ಅವರಿಬ್ಬರೂ ಸತಿಪತಿಗಳಾಗಿ ಕಾಣಿಸಿಕೊಂಡಿದ್ದರು. ಚಂದ್ರಮೋಹನ್ ಹೊಸ ಹೆಸರು, ಹೊಸ ಧರ್ಮ ಮತ್ತು ಹೊಸ ಪತ್ನಿಯನ್ನು ಪಡೆದರೂ, ಎರಡನೇ ವಿವಾಹದಿಂದಾಗಿ ತಮ್ಮ ಅತ್ಯುನ್ನತ ಪದವಿ ಉಪಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡಿದ್ದರು.ಎರಡು ತಿಂಗಳಿಂದ ತಾನಿದ್ದ ಫಿಜಾಳ ಮನೆಯಿಂದ ಕಳೆದ ವಾರ ಚಾಂದ್ ಮೊಹಮ್ಮದ್ ನಾಪತ್ತೆಯಾಗಿದ್ದು, ಅವರನ್ನು ಚಾಂದ್ ಸಹೋದರ ಕುಲದೀಪ್ ಬಿಷ್ಣೋಯ್ ಅಪಹರಿಸಿದ್ದಾರೆ ಎಂದು ಫಿಜಾ ಹೇಳಿಕೆ ನೀಡಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆಯೇ, ದೆಹಲಿಯಲ್ಲಿ ಬಳಿಕ ಗುರ್‌ಗಾಂವ್‌ನಲ್ಲಿ ಕಾಣಿಸಿಕೊಂಡ ಚಾಂದ್, ತನ್ನನ್ನು ಯಾರೂ ಅಪಹರಿಸಿಲ್ಲ, ಇಷ್ಟಪಟ್ಟು ತಾನೇ ಹೋಗಿರುವುದಾಗಿ ಹೇಳಿಕೆ ನೀಡಿದ್ದರು. ಅಂದಿನಿಂದಲೂ ಚಾಂದ್-ಫಿಜಾ ಬೇರೆಬೇರೆಯಾಗಿದ್ದರು.ನಾನೀಗ ಏನು ಎಂಬುದೇ ನನಗೆ ಗೊತ್ತಿಲ್ಲ. ನಾನು ಅವರ ಪತ್ನಿಯೇ ಅಲ್ಲವೇ ಎಂಬುದೂ ನನಗೆ ಗೊತ್ತಿಲ್ಲ. ಅವರು (ಚಾಂದ್) ಇದನ್ನು ಬಹಿರಂಗವಾಗಿ ಹೇಳುತ್ತಲೂ ಇಲ್ಲ ಎಂದು ಫಿಜಾ ತಿಳಿಸಿದ್ದಾರೆ.ಇದೇ ಸಂದರ್ಭ, ಅವಳನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂಬ ಉಲ್ಲೇಖವಿರುವ, ಚಾಂದ್ ಕಳುಹಿಸಿದ್ದ ಎಸ್ಎಂಎಸ್ ಸಂದೇಶಗಳನ್ನು ಕೂಡ ಫಿಜಾ ಓದಿ ಹೇಳಿದರು. ಮದುವೆಯಾಗುವಂತೆ ಮಾಡಿದ್ದ ಕೋರಿಕೆಯೂ ಅದರಲ್ಲಿದ್ದು, ಇದಕ್ಕೆ ಒಪ್ಪದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನೂ ಆ ಸಂದೇಶಗಳಲ್ಲಿ ನೀಡಲಾಗಿತ್ತು.ಕಳೆದ ಮೂರು ವರ್ಷಗಳಿಂದ ಅವರು ನನಗೆ ಮೆಸೇಜ್ ಕಳುಹಿಸುತ್ತಿದ್ದರು. ಮದುವೆಯಾಗದಿದ್ದರೆ ತಾನು ಸಾಯುವುದಾಗಿಯೂ ಆತ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಗುಂಡಿಕ್ಕಿಕೊಂಡು ಸಾಯುವುದಾಗಿ ಆತ ಹೇಳುತ್ತಿದ್ದರು. ನನ್ನ ನೈಜ ಪ್ರೀತಿಗೆ ವಿಶ್ವಾಸದ್ರೋಹ ಎಸಗಲಾಗಿದೆ. ಅವರು ನನ್ನ ಬಳಿ ನೇರವಾಗಿ ಮಾತನಾಡಿಲ್ಲ. ಅವರೀಗ ಚಂದ್ರಮೋಹನ್ ಆಗಿದ್ದಾರೆಯೇ ಅಥವಾ ಚಾಂದ್ ಮೊಹಮ್ಮದ್ ಆಗಿಯೇ ಇದ್ದಾರೆಯೇ ಎಂಬುದೂ ತಿಳಿದಿಲ್ಲ. ಇದು ಆತ ನನ್ನ ಜೀವನದಲ್ಲಿ ಆಡಿದ ಅತ್ಯಂತ ಕೆಟ್ಟ ಆಟ ಎಂದು ಫಿಜಾ ದುಃಖ ತೋಡಿಕೊಂಡಿದ್ದಾರೆ.ಆದರೆ ಈ ಬಗ್ಗೆ ಸುಮ್ಮನಿರುವುದಿಲ್ಲ ಎಂದು ತಿಳಿಸಿರುವ ಫಿಜಾ, ತನಗಾದ ಈ ವಿಶ್ವಾಸದ್ರೋಹಕ್ಕೆ ತಕ್ಕ ಶಾಸ್ತಿ ಮಾಡುವುದಾಗಿಯೂ ಹೇಳಿದರು. 'ನನ್ನನ್ನೊಬ್ಬ 'ಬಡಿಯಾ ಚೀಜ್' (ದೊಡ್ಡ ವಸ್ತು) ಅಂತ ಆತ ಹೇಳುತ್ತಿದ್ದರು. ನಾನೇನು ತರಕಾರಿಯಾ, ಕೋಲ್ಡ್ ಡ್ರಿಂಕಾ ಅಥವಾ ಲಸ್ಸಿಯಾ ಹಾಗೆ ಹೇಳಲು? ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರವರು' ಎಂದು ಹೇಳಿರುವ, ಫಿಜಾ, ತಾನು ಚಾಂದ್ ಮೊಹಮ್ಮದ್‌ರನ್ನು ವಿವಾಹವಾಗುವುದಕ್ಕಾಗಿ ಇಸ್ಲಾಂಗೆ ಮತಾಂತರಗೊಂಡಿರುವುದನ್ನು ನಿರಾಕರಿಸಿದರು.ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಮತ್ತು ಮುಸ್ಲಿಂ ಆಗಿಯೇ ಉಳಿಯುತ್ತೇನೆ ಎಂದು ಈಗಾಗಲೇ ಹಿಂದಿನ ವಿವಾಹದಿಂದ ವಿಚ್ಛೇದನೆ ಪಡೆದಿರುವ ಫಿಜಾ ಹೇಳಿದ್ದಾರೆ. |