ಚಾಂದ್ ಮಹಮದ್ - ಫಿಜಾ ವಿವಾದಾತ್ಮಕ ಲವ್ ಸ್ಟೋರಿಗೆ ಮತ್ತೊಂದು ತಿರುವು ದೊರೆತಿದೆ. ತನ್ನ ಮೊದಲ ಪತ್ನಿ ಸೀಮಾ ಮತ್ತಿಬ್ಬರು ಮಕ್ಕಳನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ಹರ್ಯಾಣ ಮಾಜಿ ಉಪಮುಖ್ಯಮಂತ್ರಿ ಚಂದ್ರಮೋಹನ್ ಅಲಿಯಾಸ್ ಚಾಂದ್, ಅವರಿಂದ ದೂರವಿರುವುದು ಅಸಾಧ್ಯವಾಗುತ್ತಿದೆ ಎಂದು ಹೇಳಿರುವುದರೊಂದಿಗೆ ಎರಡನೇ ಪತ್ನಿ ಜತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಲಾರಂಭಿಸಿದೆ.
ತನ್ನ ಸಹೋದರ ಕುಲದೀಪ್ ಬಿಷ್ಣೊಯ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 'ಐ ಲವ್ ಮೈ ವೈಫ್, ಕಿಡ್ಸ್. ಅವರಿಲ್ಲದೆ ಬದುಕು ಕಳಾಹೀನವಾಗಿದೆ' ಎಂದಿದ್ದಾರೆ.
ಈ ಲವ್ ಸ್ಟೋರಿಯ ಹಿನ್ನೆಲೆ ನಿಮಗೆ ಗೊತ್ತಿರಬಹುದು. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಪುತ್ರನಾಗಿರುವ ಚಂದ್ರಮೋಹನ್ ಅವರು, ಸೀಮಾಳನ್ನು ವಿವಾಹವಾಗಿದ್ದರೂ, ಅನುರಾಧಾ ಬಾಲಿಯ ಪ್ರೇಮಪಾಶಕ್ಕೆ ಸಿಲುಕಿ, ಆಕೆಯನ್ನು ಎರಡನೇ ವಿವಾಹವಾಗುವುದಕ್ಕಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಅದೇ ಕಾರಣಕ್ಕೆ ಹೆಸರನ್ನು ಚಾಂದ್ ಮೊಹಮ್ಮದ್ ಎಂದು ಬದಲಿಸಿದ್ದರೆ, ಪ್ರೇಯಸಿಯ ಹೆಸರನ್ನೂ ಫಿಜಾ ಎಂದು ಬದಲಾಯಿಸಿ ಇಬ್ಬರೂ ಕಳೆದ ನವೆಂಬರ್ ತಿಂಗಳಲ್ಲಿ ಮೀರತ್‌ನಲ್ಲಿ ಮದುವೆಯಾಗಿದ್ದರು. ಈ ಕಾರಣಕ್ಕೆ ಭಜನ್‌ಲಾಲ್ ತಮ್ಮ ಮಗನ ಸಂಬಂಧ ಕಡಿದುಕೊಂಡಿದ್ದರೆ, ಚಾಂದ್ ಉಪಮುಖ್ಯಮಂತ್ರಿ ಪದವಿಯನ್ನೂ ಕಳೆದುಕೊಂಡಿದ್ದರು. ಫಿಜಾ ಕೂಡ, ಸಹಾಯಕ ಸಾಲಿಸಿಟರ್ ಜನರಲ್ ಹುದ್ದೆಯಿಂದ ವಜಾಗೊಳಿಸಲ್ಪಟ್ಟಿದ್ದರು.
ಕೆಲವು ದಿನಗಳ ಹಿಂದೆ, ಅವರ 'ಹೊಸ' ಪತ್ನಿ ಫಿಜಾ ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಅವರ ನಡುವಿನ ಸಂಬಂಧವೆಷ್ಟು ಗಟ್ಟಿ ಎಂಬುದು ನಿಧಾನವಾಗಿ ಬೆಳಕಿಗೆ ಬರತೊಡಗಿತ್ತು. ಪತಿಯನ್ನು ಅವರ ಸಹೋದರ ಕುಲದೀಪ್ ಬಿಷ್ಣೊಯ್ ಅಪಹರಿಸಿ, ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಆದರೆ ತನ್ನನ್ನು ಅಪಹರಿಸಲಾಗಿರುವ ಆರೋಪವನ್ನು ಚಾಂದ್ ತಳ್ಳಿ ಹಾಕಿದ್ದರು.
ಮಾತ್ರವಲ್ಲ, ಚಾಂದ್ ಜತೆಗಿನ ವೈವಾಹಿಕ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು. 'ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ತಪ್ಪಭಿಪ್ರಾಯವೂ ಇಲ್ಲ. ನಾನೆಲ್ಲಿದ್ದೇನೆಂಬುದು ಅವಲಿಗೆ ಗೊತ್ತಿದೆ. ಜನರಿಗೆ ಯಾವುದೇ ಸಂಗತಿ ಗೊತ್ತಿಲ್ಲದಿದ್ದರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ' ಎಂದು ಚಾಂದ್ ಹೇಳಿದ್ದರು.
ಸಾರ್ವಜನಿಕ ಜೀವನದಲ್ಲಿದ್ದುಕೊಂಡು, ಬೇರೆಯವರಿಗೆ ಆದರ್ಶವಾಗಬೇಕಿದ್ದ ಜನನಾಯಕರ ವಿಶಿಷ್ಟ ಪ್ರೇಮ ಕಥಾನಕ ಇದೀಗ ದೇಶಾದ್ಯಂತ ಸುದ್ದಿಯ ವಸ್ತು. |