ಕಾನೂನು ಮುರಿಯಲು ತಾನು ಯಾರಿಗೂ ಅವಕಾಶ ನೀಡೆನು ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಗಾಂಧಿ ಕುಟುಂಬದ ಸದಸ್ಯರೂ ಕಾನೂನನ್ನು ಮೀರುವಂತಿಲ್ಲ ಎಂದು ಹೇಳಿದ್ದಾರೆ.ಇಟಾ ಜೈಲಿನಲ್ಲಿರುವ ತನ್ನ ಪುತ್ರ ವರುಣ್ ಗಾಂಧಿ ಅವರನ್ನು ಭೇಟಿಯಾಗಲು ಶುಕ್ರವಾರ ತನಗೆ ಅವಕಾಶ ನಿರಾಕರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಚಿವೆ ಮನೇಕಾ ಗಾಂಧಿ, ಮುಖ್ಯಮಂತ್ರಿ ಮಾಯಾವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಆಕೆಯೊಬ್ಬ ತಾಯಿಯಾಗಿದ್ದರೆ, ಹೆತ್ತೊಡಲ ನೋವು ಅರ್ಥವಾಗುತ್ತಿತ್ತು ಎಂದು ಹೇಳಿದ್ದರು. ಅಲ್ಲದೆ, ವರುಣ್ ಭೇಟಿಗೆ ಅವಕಾಶ ನಿರಾಕರಿಸಿರುವುದು ರಾಜಕೀಯ ಸೇಡಿನ ಕ್ರಮ ಎಂದು ದೂರಿದ್ದರು.ಮನೇಕಾ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮಾಯಾವತಿ, "ಮನೇಕಾ ಒಬ್ಬ ಮಗನಿಗೆ ಮಾತ್ರ ತಾಯಿ. ಆದರೆ ನಾನು ನೂರಾರು ಮಂದಿಯ ಕಾಳಜಿ ವಹಿಸುತ್ತೇನೆ" ಎಂದು ಹೇಳಿದ್ದಾರೆ. ಪ್ರೀತಿ ಮತ್ತು ಕಾಳಜಿಗೆ ತಾಯಿಯೇ ಆಗಬೇಕೆಂದೇನಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ, ಮನೇಕ ಶುಕ್ರವಾರ ಏನು ಹೇಳಿದ್ದಾರೋ ಅದಕ್ಕೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೀಡಾದವರ ಭೇಟಿಗೆ ವಾರಕ್ಕೆ ಎರಡು ಬಾರಿ ಮಾತ್ರ ಅವಕಾಶವಿದೆ ಎಂಬ ಕಾನೂನು ತೊಡಕಿನ ಕಾರಣ ನೀಡಿ ಮನೇಕಾ ಗಾಂಧಿಗೆ ವರುಣ್ ಭೇಟಿಗೆ ಶುಕ್ರವಾರ ಅವಕಾಶ ನಿರಾಕರಿಸಲಾಗಿತ್ತು. ಮಾಯಾ ಒಬ್ಬತಾಯಿಯಾಗಿದ್ದರೆ ಅರ್ಥವಾಗುತ್ತಿತ್ತು: ಮನೇಕಾ |