ಉತ್ತರಪ್ರದೇಶ ಮುಖ್ಯಮಂತ್ರಿ ಮಾಯವತಿ ವಿರುದ್ಧದ ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿರುವ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ, ಮಯಾವತಿ ಒಬ್ಬ ಸಾವಿನ ವ್ಯಾಪಾರಿ ಹಾಗೂ ಅವರು ಉತ್ತರ ಪ್ರದೇಶವನ್ನು ವಿನಾಶಕ್ಕೆ ತಳ್ಳುತ್ತಿದ್ದಾರೆ ಎಂದು ಮತ್ತೆ ಟೀಕಿಸಿದ್ದಾರೆ. ಇದಲ್ಲದೆ, ಮಯಾವತಿ ಒಬ್ಬ ಭ್ರಷ್ಟ ಮಹಿಳೆ ಹಾಗೂ ಕೊಲೆಗಾರ್ತಿ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.ಶುಕ್ರವಾರ ತನ್ನ ಪುತ್ರ ಪಿಲಿಭಿತ್ ಜೈಲಿನಲ್ಲಿ ಬಂಧಿಯಾಗಿರುವ ವರುಣ್ ಗಾಂಧಿಯನ್ನು ಭೇಟಿ ಮಾಡಲು ಅವಕಾಶ ನೀಡದಿರುವ ಕಾರಣಕ್ಕಾಗಿ ಮಾಯಾರನ್ನು ಟೀಕಿಸಿದ್ದ ಮನೇಕಾ ಗಾಂಧಿ, ಮಾಯಾವತಿ ಒಬ್ಬ ತಾಯಿಯಾಗಿದ್ದರೆ ಹೆತ್ತೊಡಲ ಅಳಲು ಅರ್ಥವಾಗುತ್ತಿತ್ತು ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಯಾವತಿ, ಮನೇಕಾ ಕೇವಲ ಒಬ್ಬ ಪುತ್ರನಿಗೆ ಮಾತ್ರ ತಾಯಿ. ಆದರೆ ನಾನು ನೂರಾರು ಜನರ ಕುರಿತು ಕಾಳಜಿ ವಹಿಸಬೇಕಿದೆ. ಪ್ರೀತಿ, ಮಮತೆ ತೋರಲು ತಾಯಿಯೇ ಅಗಿರಬೇಕೆಂದೇನಿಲ್ಲ ಎಂದು ತಿರುಗೇಟು ನೀಡಿದ್ದರು.ಅಲ್ಲದೆ, ಮನೇಕಾ ಗಾಂಧಿ ತನ್ನ ಪುತ್ರನಿಗೆ ಉತ್ತಮ ಮೌಲ್ಯಗಳನ್ನು ಕಲಿಸಿದ್ದರೆ ಆತನಿಂದು ಜೈಲಿನಲ್ಲಿ ರಾತ್ರಿಗಳನ್ನು ಕಳೆಯುತ್ತಿರಲಿಲ್ಲ. ಮನೇಕಾ ತನ್ನ ಮಾತ್ರವಲ್ಲ ಇಡೀ ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಮರು ಪ್ರತಿಕ್ರಿಯಿಸಿರುವ ಮನೇಕಾ ಮಾಯಾವತಿ ಒಬ್ಬ ಸಾವಿನ ಆರೋಪಿ, ಭ್ರಷ್ಟೆ, ಹಾಗೂ ಉತ್ತರ ಪ್ರದೇಶವನ್ನು ವಿನಾಕ್ಕೆ ತಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.ಮನೇಕಾಗೆ ಮಾಯಾವತಿ ತಿರುಗೇಟು |