ಮಿತ್ರಪಕ್ಷಗಳ ಬೆಂಬಲ ಪತ್ರದೊಂದಿಗೆ ಸಜ್ಜಿತವಾಗಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಗಳು ಬುಧವಾರ ಸಂಜೆ ಐದು ಗಂಟೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಪ್ರತಿಯಾಗಿ ರಾಷ್ಟ್ರಪತಿಯವರು ಸರ್ಕಾರ ರಚಿಸಲು ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ನೀಡಿದ್ದು, ಮೇ22ರಂದು ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.ರಾಷ್ಟ್ರಪತಿ ಭವನದಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ| ಮನಮೋಹನ್ ಸಿಂಗ್ ಅವರು, ತಮಗೆ 274 ಸದಸ್ಯ ಬಲವಿದೆ ಎಂದು ನುಡಿದರು. ಇದಲ್ಲದೆ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಆರ್‌ಜೆಡಿ ಪಕ್ಷಗಳು ಬೆಂಬಲ ಘೋಷಿಸಿದ್ದು ಒಟ್ಟು ಸಂಖ್ಯೆ 322 ಎಂಬುದಾಗಿ ಅವರು ತಿಳಿಸಿದರು.ರಾಷ್ಟ್ರಪತಿ ಭವನದಲ್ಲಿ ಸಾಂಯಕಾಲ ಈ ಇಬ್ಬರು ನಾಯಕರು ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದು, ತಮ್ಮ ಮಿತ್ರಪಕ್ಷಗಳು ನೀಡಿರುವ ಬೆಂಬಲ ಪತ್ರವನ್ನು ಸಲ್ಲಿಸಿದರು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನಿವಾಸದಲ್ಲಿ ಬುಧವಾರ ಮುಂಜಾನೆ ನಡೆದ ಯುಪಿಎ ಮಿತ್ರಪಕ್ಷಗಳ ಸಭೆಯಲ್ಲಿ ಸರ್ಕಾರ ರಚಿಸುವ ಹಕ್ಕು ಮಂಡಿಸುವ ಕುರಿತು ನಿರ್ಧರಿಸಲಾಗಿತ್ತು. ಸಭೆಯಲ್ಲಿ ಸೋನಿಯಾ ಅವರನ್ನು ಯುಪಿಎ ಅಧ್ಯಕ್ಷೆಯಾಗಿ ಮರು ಆಯ್ಕೆ ಮಾಡಲಾಗಿದೆ. ಹಾಗೂ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಅಯ್ಕೆ ಮಾಡಲಾಯಿತು.ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಯುಪಿಎ ಅಧ್ಯಕ್ಷೆ ಸ್ಥಾನಕ್ಕೆ ಸೋನಿಯಾ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದು, ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ ಅನುಮೋದಿಸಿದರು.ಕೇಂದ್ರದಲ್ಲಿ ಮುಂದಿನ ಸರ್ಕಾರ ರೂಪಿಸುವ ವಸ್ತುಸ್ಥಿತಿಯ ಕುರಿತು ಚರ್ಚಿಸಲು ಮಿತ್ರ ಪಕ್ಷಗಳ ಮುಖಂಡರು ಸಭೆ ಸೇರಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದು ಯುಪಿಎ ಅತಿದೊಡ್ಡ ಮೈತ್ರಿಕೂಟವಾಗಿ ಮೂಡಿ ಬಂದಬಳಿಕ ಯುಪಿಎ ಸಭೆ ಸೇರಿರುವುದು ಇದೇಮೊದಲಾಗಿದೆ.ಯುಪಿಎಗೆ ಹರಿದು ಬರುತ್ತಿರುವ ಬೆಂಬಲ, 316ಕ್ಕೇರಿಕೆ |