ತಿರುಪತಿ ತಿರುಮಲ ದೇವಸ್ಥಾನಂನಲ್ಲಿರುವ ದೇವರ ಆಭರಣಗಳ ಮಾಹಿತಿ ಬಹಿರಂಗ ಪಡಿಸಬೇಕು ಎಂಬುದಾಗಿ ಆಂಧ್ರಪ್ರದೇಶ ಕೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಲ್ಲಿಸಿದ್ದ ಬೆಜವಾಡ ಗೋವಿಂದ ರೆಡ್ಡಿ ಅವರಿಗೆ ಜೀವಬೆದರಿಕೆ ಒಡ್ಡಲಾಗಿದೆ ಎಂದು ಹೇಳಲಾಗಿದೆ.
ರೆಡ್ಡಿ ಅವರ ಅರ್ಜಿಯನ್ವಯ ದೇವರ ಚಿನ್ನಾಭರಣದ ಲೆಕ್ಕ ಸಲ್ಲಿಸುವಂತೆ ಟಿಟಿಡಿ ಮಂಡಳಿಗೆ ಆದೇಶ ನೀಡಲಾಗಿದ್ದು, ಇದರಂತೆ ಆಭರಣಗಳ ತಪಾಸಣೆಗೆ ಮುಂದಾಗಿದ್ದ ವೇಳೆ ದೇವರ ಆಭರಣವನ್ನು ಮುಖ್ಯ ಅರ್ಚಕ ಕಟ್ಟು ವೆಂಕಟರಮಣ ದೀಕ್ಷಿತಲು ಎಂಬವರು ಲಪಟಾಯಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು.
ತಾನೊಬ್ಬ ಬಡ ಅರ್ಚಕನಾಗಿದ್ದು, ತನ್ನ ಮೂವರು ಪುತ್ರಿಯರ ವಿವಾಹಕ್ಕಾಗಿ ತಾನು ದೇವರ ಚಿನ್ನ ಅಡ ಇರಿಸಿದ್ದಾಗಿ ಅವರು ತನಿಖೆಯ ವೇಳೆಗೆ ಒಪ್ಪಿಕೊಂಡಿದ್ದರು. ಬಳಿಕ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು. ದೀಕ್ಷಿತ ಹಾಗೂ ಮತ್ತಿಬ್ಬರ ವಿರುದ್ಧ ಈ ಕುರಿತು ಪ್ರಕರಣವನ್ನೂ ದಾಖಲಿಸಲಾಗಿದೆ.
ಗೋವಿಂದ ರೆಡ್ಡಿ ಅವರಿಗೆ ಅನಾಮಧೇಯ ಫೋನ್ ಕರೆಗಳು ಬಂದಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಾಪಾಸ್ಸು ಪಡೆಯುವಂತೆ 10 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ ಅರ್ಜಿ ಹಿಂದಕ್ಕೆ ತೆಗೆಯುವಂತೆ ಬೆದರಿಕೆಯನ್ನೂ ಒಡ್ಡಲಾಗಿದೆ. ಈ ಕರೆಗಳು ತಿರುಪತಿ ಹಾಗೂ ಚೆನ್ನೈಗಳಿಂದ ಬಂದಿವೆ ಎಂದು ವರದಿ ತಿಳಿಸಿದೆ.
ಆದರೆ, ತಾನು ಬೆದರಿಕೆಗೆ ಬಗ್ಗುವುದಿಲ್ಲ ಎಂದು ಹೇಳಿರುವ ರೆಡ್ಡಿ, ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ದೇವರ ಆಭರಣಗಳಲ್ಲಿ ಒಟ್ಟು 11 ಆಭರಣಗಳು ಕಾಣೆಯಾಗಿರುವುದು ಪತ್ತೆಯಾಗಿದ್ದು, ಇವುಗಳಲ್ಲಿ 8 ಆಭರಣಗಳನ್ನು ದೀಕ್ಷಿತರು ಅಡವಿಟ್ಟಿದ್ದಾರೆ. ಮತ್ತೆ ಮೂರು ಆಭರಣಗಳು ಏನಾಗಿದೆ ಎಂಬುದು ಪತ್ತೆಯಾಗಿಲ್ಲ