ತನ್ನ ಪುತ್ರಿಯರ ವಿವಾಹಮಾಡಲು ತಾನು ದೇವರ ಚಿನ್ನ ಕದ್ದು ಮಾರಿರುವುದಾಗಿ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ)ನ ಮುಖ್ಯ ಅರ್ಚಕರೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಕಟ್ಟು ವೆಂಕಟರಮಣ ದೀಕ್ಷಿತಲು ಎಂಬವರು ಈ ಕೃತ್ಯ ಎಸಗಿದ್ದಾರೆ. ದೇವಾಲಯದ ಆಭರಣಗಳ ದಾಸ್ತಾನು ಪರೀಕ್ಷೆ ಮಾಡುತ್ತಿದ್ದ ವೇಳೆ ಟಿಟಿಡಿ ಅಧಿಕಾರಿಗಳು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಅಭರಣ ಕಡಿಮೆ ಇರುವುದನ್ನು ಕಂಡು ಅರ್ಚಕರನ್ನು ಪ್ರಶ್ನಿಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
"ನಾನು ಮಾಡಿರುವುದು ಅಪರಾಧ ಎಂಬುದು ನನಗೆ ತಿಳಿದಿದೆ. ಆದರೆ ಏನು ಮಾಡಲಿ, ನಾನು ತುಂಬ ಬಡವ ಮತ್ತು ನನಗೆ ಮೂವರು ಹೆಣ್ಣು ಮಕ್ಕಳಿರುವ ಕಾರಣ ಅವರ ವಿವಾಹಕ್ಕಾಗಿ ಈ ರೀತಿ ಮಾಡಬೇಕಾಯಿತು" ಎಂದು ಅವರು ಹೇಳಿದ್ದಾರೆ.
"ಎರಡು ವರ್ಷಗಳ ಹಿಂದೆ ಈ ಆಭರಣಗಳನ್ನು ಕದ್ದಿದ್ದ ಅರ್ಚಕರು ಅದನ್ನು ಗಿರವಿದಾರರ ಬಳಿ ಅಡವಿಟ್ಟಿದ್ದು ಹಣಪಡೆದಿದ್ದರು. ಅರ್ಚಕರು ತನ್ನ ತಪ್ಪನ್ನು ಒಪ್ಪಿದ್ದಾರೆ. ಮತ್ತು ಕೆಲವು ತಿಂಗಳಲ್ಲೇ ಸಾಲ ವಾಪಾಸ್ ಮಾಡಿ ಆಭರಣ ಬಿಡಿಸಿ ತಂದಿಡುತ್ತಿದ್ದೆ ಎಂದು ಅರ್ಚಕರು ತನಿಖೆಯವೇಳೆಗೆ ಹೇಳಿದ್ದಾರೆ" ಎಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿಯು ಅರ್ಚಕರನ್ನು ಅಮಾನತ್ತುಗೊಳಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಇವರಲ್ಲದೆ ವೀಕ್ಷಣಾ ಅಧಿಕಾರಿ ಹಾಗೂ ಇಬ್ಬರು ಗಾರ್ಡ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಭಗವಾನ್ ವೆಂಕಟೇಶ್ವರನ ಸನ್ನಿಧಿಯು 12 ಟನ್‌ಗಳಷ್ಟು ಚಿನ್ನ ಮತ್ತು ವಜ್ರದ ಆಭರಣಗಳನ್ನು ಹೊಂದಿದೆ. 12ನೆ ಶತಮಾನದ ಆಭರಣಗಳೂ ಇಲ್ಲಿವೆ. ಸುಮಾರು 52,000 ಕೋಟಿ ರೂಪಾಯಿಗಳ ಅಭರಣಗಳು ತಿರುಪತಿ ತಿರುಮಲ ದೇವಾಲಯದಲ್ಲಿದೆ ಎನ್ನಲಾಗಿದೆ.