ಅಡ್ವಾಣಿ-ಭಾಗ್ವತ್ ಭೇಟಿ; ಶೀಘ್ರದಲ್ಲೇ ಉತ್ತರಾಧಿಕಾರಿ ಪ್ರಕಟ?
ನವದೆಹಲಿ, ಶನಿವಾರ, 29 ಆಗಸ್ಟ್ 2009( 21:07 IST )
ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಶನಿವಾರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್‌ರನ್ನು ಭೇಟಿಯಾಗಿದ್ದು, ವಿರೋಧ ಪಕ್ಷದ ನಾಯಕನ ಜವಾಬ್ದಾರಿಗೆ ರಾಜಿನಾಮೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇವೆಲ್ಲ ಮಾಧ್ಯಮಗಳ ಊಹಾಪೋಹ, ನಾಯಕತ್ವದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ಹಾಗೂ ಆರೆಸ್ಸೆಸ್‌ಗಳು ತಳ್ಳಿ ಹಾಕಿವೆ.
ಹಲವು ದಿನಗಳಿಂದ ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಶುಕ್ರವಾರ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಆರೆಸ್ಸೆಸ್ ಮುಖ್ಯಸ್ಥ ಭಾಗ್ವತ್‌ರನ್ನು ಶನಿವಾರ ಅಡ್ವಾಣಿಯವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕತ್ವವನ್ನು ಬದಲಾಯಿಸುವ ಕುರಿತೇ ಹೆಚ್ಚಿನ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಆರೆಸೆಸ್ಸ್‌ನ ಕಚೇರಿ ಕೇಶವಕುಂಜ್‌ಗೆ ತೆರಳಿದ ಅಡ್ವಾಣಿಯವರು ಪ್ರಸಕ್ತ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದ್ದಲ್ಲದೆ, ವಿರೋಧ ಪಕ್ಷದ ನಾಯಕ ಹುದ್ದೆಗೆ ರಾಜಿನಾಮೆ ನೀಡುವ ತನ್ನ ಇಂಗಿತವನ್ನೂ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಎಂ. ವೆಂಕಯ್ಯ ನಾಯ್ಡು, ಮುರಳಿ ಮನೋಹರ ಜೋಷಿ ಮುಂತಾದವರ ಜತೆ ಶುಕ್ರವಾರವೇ ಭಾಗ್ವತ್ ಮಾತುಕತೆ ನಡೆಸಿದ್ದರು.
ಆರೆಸ್ಸೆಸ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರೂ, ಪಕ್ಷದೊಳಗೆ ಸುದೃಢ ನಾಯಕತ್ವಕ್ಕಾಗಿ ಭರ್ಜರಿ ಸರ್ಜರಿಯನ್ನೇ ಆರಂಭಿಸಿದ್ದು ಅಡ್ವಾಣಿ ಮತ್ತು ರಾಜನಾಥ್ ಸಿಂಗ್ ಇಬ್ಬರನ್ನೂ ಬದಲಾಯಿಸುವ ಇರಾದೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆಯಿಲ್ಲ.. ಆದರೆ ಈ ವರದಿಗಳನ್ನು ಆರೆಸ್ಸೆಸ್ ಮತ್ತು ಬಿಜೆಪಿಗಳು ತಳ್ಳಿ ಹಾಕಿವೆ. ಪಕ್ಷದಲ್ಲಿನ ನಾಯಕತ್ವ ಬದಲಾವಣೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಅವು ಸ್ಪಷ್ಟಪಡಿಸಿವೆ.
ಉತ್ತರಾಧಿಕಾರಿಯ ಕುರಿತು ಪ್ರಸಕ್ತ ಯಾವುದೇ ಚರ್ಚೆ ನಡೆಯುತ್ತಿಲ್ಲ. ನಾಯಕತ್ವದ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಯಾರ ರಾಜಿನಾಮೆ ಕುರಿತೂ ಚರ್ಚಿಸಲಾಗಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇದ್‌ಕರ್ ಸ್ಪಷ್ಟಪಡಿಸಿದ್ದಾರೆ.
ಅತ್ತ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. 'ಪಕ್ಷವನ್ನು ಬಲಪಡಿಸುವ ಕುರಿತು ಮಾತ್ರ ಆರೆಸ್ಸೆಸ್ ಮಾತುಕತೆ ನಡೆಸುತ್ತಿದೆ. ಬಿಜೆಪಿ ಉತ್ತರಾಧಿಕಾರಿ ಕುರಿತು ಮಾತುಕತೆ ನಡೆಯುತ್ತಿಲ್ಲ. ಇದು ಎಂದಿನಂತೆ ನಡೆಯುವ ಸಾಮಾನ್ಯ ಸಭೆಯೇ ಹೊರತು ಅದಕ್ಕೆ ಬಣ್ಣ ಹಚ್ಚುವ ಅಗತ್ಯವಿಲ್ಲ' ಎಂದು ಮಾಧವ್ ಸ್ಪಷ್ಟನೆ ನೀಡಿದ್ದಾರೆ.
ಅಡ್ವಾಣಿಯವರ ಸ್ಥಾನವನ್ನು ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್‌ರ ಸ್ಥಾನಕ್ಕೆ ಅರುಣ್ ಜೇಟ್ಲಿಯವರನ್ನು ತರುವ ಕುರಿತು ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಗಾಢ ಸಮಾಲೋಚನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.