ಅಕ್ಟೋಬರ್ 13ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷಗಳಾಗಿರುವ ಶಿವಸೇನೆ ಹಾಗೂ ಬಿಜೆಪಿ ಮಿತ್ರ ಪಕ್ಷಗಳು 2004ರ ಚುನಾವಣೆ ವೇಳೆ ಅನುಸರಿಸಿದ ಸಿದ್ಧಾಂತವನ್ನೇ ಅನುಸರಿಸುವುದಾಗಿ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. "ಸೇನೆ ಹಾಗೂ ಬಿಜೆಪಿ ಮೈತ್ರಿಕೂಟವು ಸೀಟು ಹಂಚಿಕೆ ಕಾರ್ಯವನ್ನು ಬಹುತೇಕ ಅಂತಿಮಗೊಳಿಸಿದ್ದು, ಕಳೆದ ಬಾರಿಯಂತೆ ಅಷ್ಟೆ ಸಂಖ್ಯೆಯ ಸ್ಥಾನಗಳಲ್ಲಿ ಸ್ಫರ್ಧಿಸಲಿವೆ" ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಾಡ್ಕರಿ ಅವರು ಹೇಳಿದ್ದಾರೆ.
ಅಕ್ಟೋಬರ್ 13ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯು 119 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ. ಸೀಟು ಹಂಚಿಕೆಯ ಕುರಿತು ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಕೊಂಕಣ ಕರಾವಳಿಯ ಗುಹಾಗರ್ ವಿಧಾನಸಭಾ ಸ್ಥಾನದ ಕುರಿತು ಯಾವುದಾದರೂ ಭಿನ್ನಾಭಿಪ್ರಾಯಗಳಿವೆಯೇ ಎಂದು ಕೇಳಲಾದ ಪ್ರಶ್ನೆಗೆ ಇಲ್ಲ ಎಂಬುದಾಗಿ ಗಾಡ್ಕರಿ ಹೇಳಿದ್ದಾರೆ.