ಆಂಧ್ರದ ಮುಖ್ಯಮಂತ್ರಿಯ ಆಯ್ಕೆ ಮಾಡುವ ಮುಂಚಿತವಾಗಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಸಂಬಂಧ ಪಟ್ಟ ಎಲ್ಲರ ಜತೆ ಚರ್ಚಿಸಿ ಸಲಹೆಗಳನ್ನ ಪಡೆಯಲಾಗುವುದು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೈಎಸ್ಆರ್ ಪುತ್ರ ಜಗನ್ ಮೋಹನ್ ರೆಡ್ಡಿ ಬಣದವರಿಗೆ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಜಗನ್ ಮೋಹನ್ ರೆಡ್ಡಿ ಅವರ ಹೆಸರು ಜೋರಾಗಿ ಕೇಳಿಬರಲು ಪ್ರೇರಣೆ ಎನ್ನಲಾಗಿರುವ ವೈಎಸ್ಆರ್ ಅವರ ಸಲಹೆಗಾರರು ಹಾಗೂ ಆಪ್ತರೂ ಆಗಿದ್ದ ಕೆಪಿವಿ ರಾಮಚಂದ್ರರಾವ್ ಅವರು, ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರವನ್ನು ಶೀಘ್ರವೇ ಪರಿಹರಿಸಲಾಗುವುದು ಎಂಬುದಾಗಿ ಸೋನಿಯಾಗಾಂಧಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಸೋನಿಯಾ ಜತೆ ಸುಮಾರು ಒಂದು ತಾಸು ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರಧಾನಿ ಮನಮೋಹನ್ ಸಿಂಗ್, ಆಂಧ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಕ್ಷದ ಮುಖಂಡರು ಹಾಗೂ ಸಂಬಂಧಪಟ್ಟ ಇತರರ ಜತೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂಬುದಾಗಿ ಸೋನಿಯಾ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಜಗನ್ ಪರ ಲಾಬಿ ಮಾಡುತ್ತಿದ್ದ ರಾವ್ ಅವರು ಹೈಕಮಾಂಡ್ ಸೂಚನೆಯಂತೆ ಇದೀಗ ಜಗನ್ ಪರ ಬಹಿರಂಗ ಪ್ರಚಾರ ನಿಲ್ಲಿಸಿದ್ದಾರೆನ್ನಲಾಗಿದೆ. ರಾಜ್ಯಸಭಾ ಸದಸ್ಯರೂ ಆಗಿರುವ ರಾವ್ ಜಗನ್‌ರಿಗೆ ಬೆಂಬಲ ನೀಡುವಂತೆ ವಿನಂತಿಸಿದ್ದಾರೆನ್ನಲಾಗಿದೆ.