ಆಂಧ್ರದಲ್ಲಿ ವೈಎಸ್ಆರ್‌ಗೆ ದೇಗುಲ, ಅಲ್ಲಲ್ಲಿ ಪ್ರತಿಮೆಗಳು!
ಹೈದರಾಬಾದ್, ಬುಧವಾರ, 9 ಸೆಪ್ಟೆಂಬರ್ 2009( 13:51 IST )
PTI
ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಯೆಡುಗುರಿ ಸ್ಯಾಮುಯೆಲ್ (ಸಂದಿಂಟಿ) ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಕೆಲವೇ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ಕೆಲವು ಜಿಲ್ಲೆಗಳು ಚುನಾವಣೆಯ ರಂಗು ಪಡೆದುಕೊಳ್ಳುತ್ತಿವೆ. ಎಲ್ಲೆಲ್ಲೂ ವೈಎಸ್ಆರ್ ಹೋರ್ಡಿಂಗ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದರೆ, ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಪ್ರತಿಮೆಗಳು ತಲೆ ಎತ್ತಲಿವೆ. ಅಷ್ಟು ಮಾತ್ರವಲ್ಲ, ಗುಂಟೂರಿನಲ್ಲಿ ವೈಎಸ್ಆರ್ ಅವರಿಗೇ ಸಮರ್ಪಿತವಾದ ದೇಗುಲವೂ ತಲೆ ಎತ್ತಲಿದೆ! ಆದರೆ ಇದು ಯಾವುದೇ ಚುನಾವಣೆಯ ಮುನ್ಸೂಚನೆಯಲ್ಲ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ಆ ರಾಜ್ಯದ ತೆರಿಗೆದಾರರ ಹಣದಲ್ಲಿ ತನ್ನದೂ ಸೇರಿದಂತೆ ಹಲವರ ಪ್ರತಿಮೆ ನಿರ್ಮಾಣ ಯೋಜನೆಗೆ ಸುಪ್ರೀಂಕೋರ್ಟಿನಿಂದ ಈಗಾಗಲೇ ಮುಖಭಂಗಕ್ಕೀಡಾಗಿರುವುದು ಇಲ್ಲಿ ಉಲ್ಲೇಖಾರ್ಹ.
ಈಗ ಹೈದರಾಬಾದ್ ಪ್ರವೇಶಿಸಿದರೆ, ಎಲ್ಲೆಲ್ಲೂ ವೈಎಸ್ಆರ್ ನಗುಮಖದಿಂದ ನಿಮ್ಮನ್ನು ಸ್ವಾಗತಿಸುತ್ತಾರೆ. ಇದೇನು ಇಷ್ಟು ಬೇಗ ಚುನಾವಣೆ ಬಂದಿತೇ? ಎಂದು ಅಲ್ಲಿ ನೋಡಿದವರಿಗೆ ಒಂದು ಬಾರಿ ಅಚ್ಚರಿಯಾಗಬಹುದು. ಇದು ಅಲ್ಲಿನ ಕಟೌಟ್, ಬ್ಯಾನರ್‌ಗಳ ಮಹಿಮೆ. ಅಷ್ಟು ಮಾತ್ರವಲ್ಲದೆ, ರಾಜ್ಯಾದ್ಯಂತ ವೈಎಸ್ಆರ್ ಪ್ರತಿಮೆಗಳನ್ನು ಅಲ್ಲಲ್ಲಿ ನಿರ್ಮಿಸಲು ಅಲ್ಲಿನ ಕಾಂಗ್ರೆಸಿಗರು ಪಣ ತೊಟ್ಟಿದ್ದಾರೆ. ಆಂಧ್ರದ ಕಾಂಗ್ರೆಸ್ ಸಂಸದ ಕನುಮೂರಿ ಬಾಪಿರಾಜು ಈಗಾಗಲೇ ಈ ಕುರಿತು ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ, ಗುಂಟೂರಿನಲ್ಲಿ ವೈಎಸ್ಆರ್ ಅವರಿಗಾಗಿ ದೇವಾಲಯವೊಂದನ್ನೂ ಸ್ಥಾಪಿಸುವ ಯೋಜನೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ದೇವಳಕ್ಕೆ ರಾಜಶೇಖರಾಲಯಂ ಎಂದು ಹೆಸರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕಡಪ ಜಿಲ್ಲೆಗಂತೂ ಈಗಾಗಲೇ ರಾಜಶೇಖರ ರೆಡ್ಡಿ ಕಡಪ ಜಿಲ್ಲೆ ಎಂದು ಮರು ನಾಮಕರಣ ಮಾಡಲಾಗಿದೆ!
ವೈಎಸ್ಆರ್ ದುರಂತ ಸಾವಿಗೀಡಾದ ನಲ್ಲಮಾಲ ರಾಜೀವ್ ಗಾಂಧಿ ವ್ಯಾಘ್ರ ಅಭಯಾರಣ್ಯದಲ್ಲಿ ವೈಎಸ್ಆರ್ ಸ್ಮಾರಕ ನಿರ್ಮಿಸುವುದಾಗಿ ಈಗಾಗಲೇ ಅಲ್ಲಿನ ಕಾಂಗ್ರೆಸ್ ಸರಕಾರ ಘೋಷಿಸಿರುವುದಕ್ಕೆ ಈಗಾಗಲೇ ವಿರೋಧವೂ ವ್ಯಕ್ತವಾಗಿದೆ. ಅಲ್ಲಿ ಸ್ಮಾರಕ ನಿರ್ಮಿಸಿದರೆ, ಅಲ್ಲಿ ರಸ್ತೆ ನಿರ್ಮಾಣವಾಗುತ್ತದೆ, ಜನರ ಓಡಾಟ ಹೆಚ್ಚಾಗುತ್ತದೆ, ಇದರಿಂದ ಅಭಯಾರಣ್ಯದೊಳಗಿರುವ ಪ್ರಾಣಿ ಸಂಕುಲಕ್ಕೆ ಅಪಾಯವೂ ಎದುರಾಗುತ್ತದೆ ಎಂಬ ಕಾರಣಕ್ಕೆ ಈ ವಿರೋಧ.
ವೈಎಸ್ಆರ್ ಅಭಿಮಾನಿ ಕಾಂಗ್ರಿಸಿಗರು ಮತ್ತಷ್ಟು ಮುಂದೆ ಹೋಗಿದ್ದಾರೆ. ಸ್ಥಳೀಯಾಡಳಿತ ಸಮಿತಿಗಳು, ಮಾರುಕಟ್ಟೆ ಸಮಿತಿಗಳು, ಪಾರ್ಕುಗಳು, ರಸ್ತೆಗಳಿಗೆಲ್ಲಾ ವೈಎಸ್ಆರ್ ಹೆಸರಿಡುವ ಬಗ್ಗೆ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಇದಲ್ಲದೆ, ಆಂಧ್ರದಲ್ಲಿ ಈಗ ಯಶಸ್ವಿಯಾಗಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎನ್ಆರ್ಇಜಿಎ)ಗೆ ರಾಜಶೇಖರ ರೆಡ್ಡಿ ಹೆಸರಿಡಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.