ರಾಷ್ಟ್ರದ ಎರಡನೆ ಪ್ರಧಾನಿ ಲಾಲ್ ಬಹಾದ್ದೂರ್ ಅವರ ಸ್ಮಾರಕದಲ್ಲಿ ಇರಿಸಲಾಗಿದ್ದ ಬೆಲೆಬಾಳುವ ಚಿನ್ನದ ವಾಚ್ ಕಳವಾಗಿದೆ. ರಾಷ್ಟ್ರಪತಿ ಭವನದಲ್ಲಿ ಕಳ್ಳತನ ನಡೆದಿರುವ ಕೆಲವೇ ದಿನಗಳ ಬಳಿಕ ಈ ಪ್ರಕರಣದ ಕುರಿತು ವರದಿಯಾಗಿದೆ.
ಶಾಸ್ತ್ರಿ ಅವರು 1966ರಲ್ಲಿ ಐತಿಹಾಸಿಕ ತಾಷ್ಕೆಂಟ್ ಸಮ್ಮೇಳನಕ್ಕೆ ತೆಳಿದ್ದ ವೇಳೆ ಆಗಿನ ರಶ್ಯಾ ಪ್ರಧಾನಿ ಅಲೆಕ್ಸಿ ಕೊಸಿಜಿನ್ ಅವರು ಉಡುಗೊರೆಯಾಗಿ ನೀಡಿದ್ದ ಚಿನ್ನದ ವಾಚನ್ನು ಸೋನಿಯಾಗಾಂಧಿ ನಿವಾಸದ ಪಕ್ಕದಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಮಾರಕಾಲಯದಲ್ಲಿ ಇರಿಸಲಾಗಿದ್ದು, ಇದನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಸ್ಮಾರಕದಲ್ಲಿ ಇರಿಸಲಾಗಿದ್ದ ವಾಚ್ ಕಳವಾಗಿರುವ ಕುರಿತು ಸೆಪ್ಟೆಂಬರ್ 3ರಂದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೆ ಅವರು ನಾಲ್ಕು ದಿನಗಳ ಬಳಿಕವಷ್ಟೆ ಈ ಕುರಿತು ಪೊಲೀಸರನ್ನು ಸಂಪರ್ಕಿಸಿದ್ದಾರೆ. ನಾಪತ್ತೆಯಾಗಿರುವ ವಾಚನ್ನು ಹುಡುಕಲು ಪ್ರಯತ್ನಿಸಿದ್ದು ವಿಫಲವಾದ ಬಳಿಕ ಸೆಪ್ಟೆಂಬರ್ 7ರಂದು ಪೊಲೀಸರನ್ನು ಸಂಪರ್ಕಿಸಿರುವುದಾಗಿ ಅವರು ಇದಕ್ಕೆ ಸಮರ್ಥನೆ ನೀಡಿದ್ದಾರೆ.
ಸ್ಮಾರಕದ ನಿರ್ದೇಶಕ ಪ್ರೊ| ಎ.ಕೆ. ದಾಸ್ ಅವರು ತುಗಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಾನು ಮತ್ತು ತನ್ನ ಸಿಬ್ಬಂದಿಗಳು ಈ ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸಿದ್ದರೂ ವಾಚ್ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಇದು ವೀಕ್ಷಕರ ಕೈಚಳಕವಿರಬಹುದು ಎಂಬುದಾಗಿ ಪೊಲೀಸರು ಮೇಲ್ನೋಟಕ್ಕೆ ಊಹಿಸಿದ್ದಾರಾದರೂ ತನಿಖೆ ಮುಂದುವರಿಸಿದ್ದಾರೆ.