ಆಡ್ವಾಣಿ ರಥಯಾತ್ರೆಯನ್ನು ಸ್ವಂತ ಲಾಭಕ್ಕೆ ಬಳಸಿದರು: ಸಿಂಘಾಲ್
ನವದೆಹಲಿ, ಬುಧವಾರ, 9 ಸೆಪ್ಟೆಂಬರ್ 2009( 20:04 IST )
ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರ ವಿರುದ್ಧ ಟೀಕೆ, ಆಪಾದನೆಗಳು ಮುಂದುವರಿದಿದ್ದು, ಪ್ರಸಕ್ತ ಸರದಿ ಅಶೋಕ್ ಸಿಂಘಾಲ್ ಅವರದ್ದು. ಬಿಜೆಪಿಯ ನುರಿತ ರಾಜಕಾರಣಿ ಎಲ್.ಕೆ. ಆಡ್ವಾಣಿ ಅವರು ಅಯೋಧ್ಯೆ ರಾಮ ಮಂದಿರ ವಿಚಾರವನ್ನು ತನ್ನ ಸ್ವಂತ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು ಎಂಬುದಾಗಿ ವಿಶ್ವಹಿಂದೂ ಪರಿಷತ್‌ನ ಹಿರಿಯ ನಾಯಕರಾಗಿರುವ ಅಶೋಕ್ ಸಿಂಘಾಲ್ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾದ ರಥಯಾತ್ರೆಯನ್ನು ಆಡ್ವಾಣಿ ಅವರು ವೈಯಕ್ತಿಕವಾಗಿ ರಾಜಕೀಯ ಲಾಭಗಳಿಸಲು ನಡೆಸಿದರು ಎಂಬುದಾಗಿ ಸಿಂಘಾಲ್ ಗಂಭೀರ ಆರೋಪ ಹೊರಿಸಿದ್ದಾರೆ. ಅಲ್ಲದೆ, ಲೋಕಸಭಾ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಆಡ್ವಾಣಿಯವರು ಕೆಳಗಿಳಿಯಲು ಈಗ ಕಾಲ ಪಕ್ವವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಶಕ್ತಿಯುತ ರಾಜಕೀಯ ಪಡೆಯಾಗಿದ್ದ ಬಿಜೆಪಿಯ ಶಕ್ತಿಕುಂದಿರುವುದನ್ನು ಟೀಕಿಸಿದ ಸಿಂಘಾಲ್, ಪಕ್ಷವು ತನ್ನ ಮೂಲಭೂತ ನೀತಿಗಳಿಂದ ವಿರುದ್ಧ ದಿಕ್ಕಿನತ್ತ ಸಾಗುತ್ತಿರುವುದೇ ಅದು ಮುಳುಗುತ್ತಿರಲು ಕಾರಣ ಎಂದು ಅಭಿಪ್ರಾಯಿಸಿದ್ದಾರೆ.
ಬಿಜೆಪಿಯು ಆಂತರಿಕ ಭಿನ್ನಾಭಿಪ್ರಾಯದ ಕಠಿಣಕರ ವಾತಾವರಣದಲ್ಲಿ ಇರುವಾಗಲೇ ವಿಹಿಂಪ ನಾಯಕರ ಈ ಹೇಳಿಕೆ ಹೊರಬಿದ್ದಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸತತ ಎರಡನೇ ಬಾರಿಗೆ ಸೋತು ಮೊದಲೇ ಹದಗೆಟ್ಟಿರುವ ಸಂದರ್ಭದಲ್ಲಿ ಒಂದಿಲ್ಲ ಒಂದು ವಿವಾದಗಳು ಅದನ್ನು ಮುತ್ತಿಕೊಳ್ಳುತ್ತಲೇ ಇದೆ. ಕಾಂಧಹಾರ್ ಪ್ರಕರಣದಲ್ಲಿ ಆಡ್ವಾಣಿ ಸುಳ್ಳುಹೇಳಿದ್ದಾರೆಂಬುದು, ಪಾಕಿಸ್ತಾನ ಸಂಸ್ಥಾಪಕ ಜಿನ್ನಾ ಕುರಿತ ತನ್ನ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಜಿನ್ನಾರನ್ನು ಹೊಗಳಿರುವುದು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು, ಹಿರಿಯ ಬಿಜೆಪಿ ನಾಯಕರು ಮತ್ತು ಆರ್ಎಸ್ಎಸ್ ಸಲಹೆ ಮುಂತಾದುವುಗಳು ಪಕ್ಷದ ಇಮೇಜಿಗೆ ಭಾರೀ ಹಾನಿಯುಂಟುಮಾಡಿದೆ.