ನೋಯ್ಡಾದ ಶಾಲಾ ಹುಡುಗಿ ಅರುಷಿ ತಲ್ವಾರ್ ಹಾಗೂ ಆಕೆಯ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣದ ತನಿಖೆಗಾಗಿ ಹೊಸ ತಂಡವನ್ನು ರಚಿಸುವುದಾಗಿ ಸಿಬಿಐ ಬುಧವಾರ ಘೋಷಿಸಿದೆ. "ಅರುಷಿ ಕೊಲೆ ಪ್ರಕರಣದ ತನಿಖೆಗಾಗಿ ಹೊಸ ತಂಡವನ್ನು ರೂಪಿಸಲಾಗುತ್ತಿದೆ" ಎಂಬುದಾಗಿ ಸಿಬಿಐ ವಕ್ತಾರ ಹರ್ಷ ಬಾಲ್ ತಿಳಿಸಿದ್ದಾರೆ.
ತನಿಖೆಯ ನೇತೃತ್ವ ವಹಿಸಿರುವ ಸಿಬಿಐ ಡಿಐಜಿ ಅರುಣ್ ಕುಮಾರ್ ಅವರ ಸೇವಾವಧಿಯು ಅಕ್ಟೋಬರ್ ತಿಂಗಳಿನಲ್ಲಿ ಅಂತ್ಯಗೊಳ್ಳುತ್ತಿರುವ ಕಾರಣ ಅವರ ಅವಧಿ ಅಂತ್ಯಗೊಳ್ಳುವ ಮುಂಚಿತವಾಗಿ ತಂಡವನ್ನು ರೂಪಿಸಲಾಗುವುದು ಎಂದು ಬಾಲ್ ತಿಳಿಸಿದ್ದಾರೆ.
ಅರುಷಿ ಸಾವನ್ನಪ್ಪಿ 17 ತಿಂಗಳ ಬಳಿಕ ಹೊಸತಂಡವನ್ನು ರೂಪಿಸಲಾಗುತ್ತಿದೆ. ಕಳೆದ 2008ರ ಮೇ ತಿಂಗಳ 16ರಂದು ಅರುಷಿ ನೋಯ್ಡಾದ ಜಲ್ವಾಯು ವಿಹಾರದಲ್ಲಿರುವ ತನ್ನ ನಿವಾಸದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಮನೆಗೆಲಸದಾಳು ಹೇಮರಾಜ್ ಮೇಲೆ ಸಂಶಯ ಪಡಲಾಗಿತ್ತಾದರೂ, ಬಳಿಕ ಆತನ ಶವವೂ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು.
ಅವಳಿ ಕೊಲೆ ಪ್ರಕರಣದ ದುರ್ಬಲ ತನಿಖೆ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ತಮ್ಮ ರಾಜ್ಯಕ್ಕೆ(ಉತ್ತರಪ್ರದೇಶ) ಮರಳಲು ಹೇಳಲಾಗಿದೆ. ಅರುಷಿಯ ಯೋನಿ ದ್ರವದ ಮಾದರಿಯನ್ನು ಮಾದರಿಯನ್ನು ಇನ್ನೊಬ್ಬ ಮಹಿಳೆಯ ಮಾದರಿಯೊಂದರೊಂದಿಗೆ ಬದಲಿಸಲಾಗಿತ್ತು ವರದಿಗಳು ಬಹಿರಂಗವಾಗಿರುವ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಕುಮಾರ್ ಅವರನ್ನು ಡೆಪ್ಯೂಟೇಶನ್ ಮೇಲೆ ಸಿಬಿಐಗೆ ಕಳುಹಿಸಲಾಗಿತ್ತು.