ರಾಜಧಾನಿ ದೆಹಲಿಯ ಖಾಜುರಿ ಖಾಸ್ ಎಂಬಲ್ಲಿನ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 5 ಮಕ್ಕಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಈ ಪ್ರಕರಣದ ಕುರಿತು ತನಿಖೆಗೆ ಆದೇಶ ನೀಡಲಾಗಿದೆ.
ರಾಜಧಾನಿಯಲ್ಲಿ ಭಾರಿ ಮಳೆಯಾಗಿದ್ದು, ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂಬ ವದಂತಿಯೊಂದರಿಂದಾಗಿ ಮಕ್ಕಳು ದಿಕ್ಕಾಪಾಲಾಗಿ ಓಡತೊಡಗಿದ್ದರಿಂದ ಈ ಕಾಲ್ತುಳಿತ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.
ಗಾಯಗೊಂಡ ಮಕ್ಕಳನ್ನು ಸಮೀಪದ ಜಿಟಿಬಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಇತರ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
14ರಿಂದ 18ರ ಹರೆಯದ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಈ ದುರ್ಘಟನೆ ಸಂಭವಿಸುವ ಮುಂಚಿತವಾಗಿ ಪರೀಕ್ಷೆ ಬರೆಯುತ್ತಿದ್ದರು. ಸುಮಾರು 21 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮೊದಲ ಮಹಡಿಯಲ್ಲಿದ್ದ ವಿದ್ಯಾರ್ಥಿಗಳು ಹೊರಗೋಡುವ ರಭಸದಲ್ಲಿ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಮತ್ತು ಇನ್ನು ಕೆಲವು ಮಕ್ಕಳು ಮೆಟ್ಟಿಲುಗಳ ಮೂಲಕ ಕೆಳಗಿನಿಂದ ಮೇಲೇರುವ ವೇಳೆ ನೂಕುನಗ್ಗಲು ಉಂಟಾಗಿದೆ. ಇಕ್ಕಟ್ಟಾದ ಮೆಟ್ಟಿಲು ಪ್ರದೇಶದಲ್ಲಿ ಮಕ್ಕಳು ಸಿಕ್ಕಿಹಾಕಿಕೊಂಡಿದ್ದು ಈ ದುರ್ಘಟನೆ ಸಂಭವಿಸಿದೆ.
ಈ ಶಾಲೆಯಲ್ಲಿ ಬಹುತೇಕ ಬಡವರ್ಗದವರ ಮಕ್ಕಳೇ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಘಟನೆಯಿಂದ ಆಕ್ರೋಶಗೊಂಡಿರುವ ಹೆತ್ತವರು ಮತ್ತು ಪೊಷಕರು ಶಾಲೆಯ ಸುತ್ತ ಜಮಾಯಿಸಿದ್ದು, ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲುತೂರಾಟ ನಡೆಸಿರುವ ಆಕ್ರೋಶಿತರು ಬಸ್ ಒಂದರ ಗಾಜು ಒಡೆದು ಹಾಕಿದ್ದಾರೆ.
ಲಕ್ಷ ರೂಪಾಯಿ ಪರಿಹಾರ ಘೋಷಣೆ ಘಟನೆಯ ಕುರಿತು ತನಿಖೆಗೆ ಆದೇಶ ನೀಡಿರುವ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ಘಟನೆಯಲ್ಲಿ ಮೃತರಾದ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಿ ತಲಾ 50 ಸಾವಿರ ನೀಡುವುದಾಗಿಯೂ ಅವರು ಹೇಳಿದ್ದಾರೆ.