ಹೈದರಾಬಾದ್, ಗುರುವಾರ, 10 ಸೆಪ್ಟೆಂಬರ್ 2009( 12:24 IST )
ಆಂಧ್ರಪ್ರದೇಶದ ಅಧಿಕಾರದ ಕಾರಿಡಾರ್‌ನಲ್ಲಿ ಅಸಹಕಾರ ಚಳುವಳಿ ಆರಂಭಗೊಂಡಿರುವಂತೆ ತೋರುತ್ತದೆ. ಉಸ್ತುವಾರಿ ಮುಖ್ಯಮಂತ್ರಿ ರೋಸಯ್ಯ ಅವರು ಕರೆದಿದ್ದ ಅವಲೋಕನ ಸಭೆಗೆ ಒಬ್ಬೇ ಒಬ್ಬ ಮಂತ್ರಿ ಹಾಜರಿರಲಿಲ್ಲ.
"ಸಭೆಗೆ ಹಾಜರಾಗಿದ್ದ ಏಕೈಕ ರಾಜಕೀಯ ಪ್ರತಿನಿಧಿ ಎಂದರೆ ರೋಸಯ್ಯ ಅವರು ಮಾತ್ರ. ಇಂತಹ ಘಟನೆಯನ್ನು ಹಿಂದೆಂದಿಗೂ ತಾನು ಕಂಡಿಲ್ಲ. ಇದು ನಿಜವಾಗಿಯೂ ವ್ಯಾಕುಲಕಾರಿ. ಆಡಳಿತವು ರಾಜಕೀಯದ ಆಡುಂಬೊಲವಾಗಿದೆ" ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ನೋವು ತೋಡಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯ ಕಾಂಗ್ರೆಸ್‌ನೊಳಗೆ ಬಿರುಕು ಹೆಚ್ಚುತ್ತಿದೆ. ಕ್ಷಿಪ್ರಕ್ರಾಂತಿ ನಡೆಸುವ ಭೀತಿಯಿಂದಾಗಿ ದಿವಂಗತ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ನಿಕಟ ಸಹವರ್ತಿ ಕೆವಿಪಿ ರಾಮಚಂದ್ರ ರಾವ್ ಅವರನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ದೆಹಲಿಯಲ್ಲಿ ಇರುವಂತೆ ಮಾಡಿದ್ದಾರೆ.
ರೋಸಯ್ಯ ಅವರು 34 ಶಾಸಕರೊಂದಿಗೆ ಕಳೆದ ಭಾನುವಾರ ಮುಖ್ಯಮಂತ್ರಿಯಾಗಿ ಪ್ರಮಾಣವನ ಸ್ವೀಕರಿಸಿದ್ದಾರೆ. ಅಸಮಾಧಾನದಿಂದಲೇ ರೋಸಯ್ಯ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿರುವ ಮಂತ್ರಿಗಳು ಜಗನ್ ಮೋಹನ್ ಅವರು ಮುಖ್ಯಮಂತ್ರಿಯಾದರೆ ಮಾತ್ರ ತಾವು ಕೆಲಸ ಮಾಡುತ್ತೇವೆ ಎಂಬ ಸಂದೇಶವನ್ನು ಸಚಿವರು ರವಾನಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಲೆಏರಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಅವಲೋಕನಕ್ಕಾಗಿ ರೋಸಯ್ಯ ಅವರು ನಾಗರಿಕ ಪೂರೈಕೆ ಇಲಾಖೆಯ ಸಭೆ ಕರೆದಿದ್ದರು. ಆದರೆ ನಾಗರಿಕಪೂರೈಕೆ ಸಚಿವ ಜುಪಳ್ಳಿ ಕೃಷ್ಣ ಅವರಾಗಲಿ ಅಥವಾ ನಾಗರಿಕ ಪೂರೈಕೆಗಳ ಆಯುಕ್ತ ಸಂಜಯ್ ಜಜು ಅವರಾಗಲಿ ಸಭೆಯಲ್ಲಿ ಹಾಜರಿರಲಿಲ್ಲ.
ರಾಜ್ಯದಲ್ಲಿನ ಬರಪರಿಸ್ಥಿತಿಯ ಪರಾಮರ್ಷೆಗಾಗಿ ಸೋಮವಾರ ರೋಸಯ್ಯ ಅವರು ಕರೆದಿದ್ದ ಸಭೆಗೆ ಎನ್. ರಘುವೀರ ರೆಡ್ಡಿ ಹಾಜರಿರಲಿಲ್ಲ. ಮರುದಿನ ಹಂದಿಜ್ವರದ ಪರಿಸ್ಥಿತಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಆರೋಗ್ಯ ಸಚಿವ ಎನ್. ರಘುವೀರ ರೆಡ್ಡಿ ಹಾಜರಿರಲಿಲ್ಲ. ಒಟ್ಟಿನಲ್ಲಿ ಸಚಿವರ ಅಸಕಾರ ದಿನೇದಿನೇ ಹೆಚ್ಚುತ್ತಿದೆ.