ತಮಿಳು ಚಿತ್ರತಾರೆ ರಜನಿಕಾಂತ್ ಕಾಂಗ್ರೆಸ್‌ಗೆ ಬಂದರೆ ಅವರಿಗೆ ಸ್ವಾಗತವಿದೆ ಎಂಬುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ ಎಂಬುದನ್ನು ಅಲ್ಲಗಳೆದಿದ್ದು, ಉಭಯ ಪಕ್ಷಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಭೇಟಿ ಮಾಡದಿರುವ ಕುರಿತು ಹಬ್ಬಿರುವ ವದಂತಿಗಳನ್ನು ತಳ್ಳಿಹಾಕಿದ ಅವರು ಕರುಣಾನಿಧಿ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.
"ಕರುಣಾನಿಧಿಯವರನ್ನು ಭೇಟಿಯಾಗದಿರುವುದರ ಹಿಂದೆ ಏನೂ ಇಲ್ಲ. ಅನೇಕ ವಿಚಾರಗಳಲ್ಲಿ ನಾನು ಅವರ ಅಭಿಮಾನಿಯಾಗಿದ್ದು, ಅವರ ಮೇಲೆ ಭಾರೀ ಗೌರವವಿದೆ" ಎಂದು ರಾಹುಲ್ ಹೇಳಿದ್ದಾರೆ. ಅಲ್ಲದೆ ಡಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಸ್ನೇಹ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಅವರು ತಮ್ಮ ಮೂರುದಿನಗಳ ತಮಿಳ್ನಾಡು ಭೇಟಿಯ ವೇಳೆ ಚೆನ್ನೈಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಉತ್ತರ ಪ್ರದೇಶದಂತೆ ದೇಶದ ಎಲ್ಲೆಡೆ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಪ್ರತಿರಾಜ್ಯಗಳಲ್ಲಿನ ಸ್ಥಿತಿಗತಿಗಳು ಭಿನ್ನವಾಗಿರುತ್ತವೆ. ರಾಷ್ಟ್ರದ್ಯಂತ ಉತ್ತರ ಪ್ರದೇಶ ಸಿದ್ಧಾಂತವನ್ನು ಅಳವಡಿಸುವ ಸಾಧ್ಯತೆಗಳು ಕಡಿಮೆ" ಎಂಬುದಾಗಿ ಉತ್ತರಿಸಿದ್ದಾರೆ.