ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶೇ.5ರಷ್ಟು ತುಟ್ಟಿಭತ್ಯೆ ಹೆಚ್ಚಿಸಿರುವುದಾಗಿ ಸರ್ಕಾರವು ಗುರುವಾರ ಘೋಷಿಸಿದೆ. ಹೆಚ್ಚಳವು ಕಳೆದ ಜುಲೈನಿಂದ ಅನ್ವಯವಾಗುವಂತೆ ಜಾರಿಗೆ ಬರಲಿದ್ದು, ಕೇಂದ್ರದ ಬೊಕ್ಕಸಕ್ಕೆ 2,904ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.
ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಅವರು ಈ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ಪರಿಹಾರ ಸೇರಿದಂತೆ ಒಟ್ಟು ಸೇರಿ ಇಡಿಯ ವರ್ಷಕ್ಕೆ ಸರ್ಕಾರಿ ಖಜಾನೆಯ ಮೇಲೆ 4,355.35 ಕೋಟಿ ರೂಪಾಯಿ ಹೊರೆ ಬೀಳಲಿದೆ. ಪ್ರಸಕ್ತ ವರ್ಷದಲ್ಲಿ ಜುಲೈಯಿಂದ ಮಾರ್ಚ್ ತನಕ ಮಾತ್ರವೇ ಭರಿಸಬೇಕಾಗಿದ್ದು ಒಟ್ಟು ವೆಚ್ಚ 2,904ಕೋಟಿ ರೂಪಾಯಿ ಆಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಜಾರಿಯಲ್ಲಿರುವ ಶೇ.22ರ ದರದ ಮೇಲೆ ಶೇ.5ರಷ್ಟು ತುಟ್ಟಿಭತ್ಯೆ ಹಾಗೂ ಪಿಂಚಣಿದಾರರಿಗೆ ಪರಿಹಾರದ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.