ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರಾಗಿರುವ ಬೂಟಾ ಸಿಂಗ್ ಅವರ ಹೇಳಿಕೆಯನ್ನು ಸಿಬಿಐ ಗುರುವಾರ ದಾಖಲಿಸಿಕೊಂಡಿದೆ. ಬೂಟಾಸಿಂಗ್ ಅವರ ಪುತ್ರ ಒಳಗೊಂಡಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
"ಅವರಿಗೆ ಏನೆಲ್ಲ ಮಾಹಿತಿ ಬೇಕಿತ್ತೋ ಅದನ್ನು ನಾನು ನೀಡಿದ್ದೇನೆ" ಎಂಬುದಾಗಿ ಬೂಟಾ ಸಿಂಗ್ ಸಿಬಿಐ ತಂಡವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಆದರೆ ತಾನೇನು ಮಾಹಿತಿ ನೀಡಿದ್ದೇನೆ ಅಥವಾ ಸಿಬಿಐ ಏನು ಮಾಹಿತಿ ಕೇಳಿತು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.
ತನ್ನನ್ನು ಸಾಕ್ಷಿಯಾಗಿಯೇ ವಿನಹ ಅಪರಾಧಿಯಾಗಿ ವಿಚಾರಣೆಗೊಳಪಡಿಸುವುದಿಲ್ಲ ಎಂಬುದಾಗಿ ಸಿಬಿಐ ದೃಢಪಡಿಸಿದ ಬಳಿಕವೇ ತಾನು ಸಿಬಿಐ ಮುಂದೆ ಹಾಜರಾಗುವುದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಗವರ್ನರ್ ಆಗಿದ್ದ ಬೂಟಾಸಿಂಗ್ ಅವರು ದೆಹಲಿ ಹೈಕೋರ್ಟ್ ಮುಂದೆ ಆಗಸ್ಟ್ 31ರಂದು ವಿನಂತಿಸಿದ್ದರು.
ಸಿವಿಲ್ ಕೋರ್ಟಿನ ಅಧಿಕಾರವುಳ್ಳ ಸಾಂವಿಧಾನಿಕ ಅಧಿಕಾರಿಯಾಗಿರುವ ತನ್ನನ್ನು ಪ್ರಶ್ನಿಸುವ ಅಧಿಕಾರ ಸಿಬಿಐಗೆ ಇಲ್ಲ ಎಂಬ ಹಠಮಾರಿ ಧೋರಣೆ ತಾಳಿದ್ದ ಸಿಂಗ್ ಗುರುವಾರ ಲೋಕಮಾನ್ಯ ಭವನದಲ್ಲಿದ್ದ ತನ್ನ ಕಚೇರಿಯಲ್ಲಿ ಸಿಬಿಐ ತಂಡದ ಮುಂದೆ ಹೇಳಿಕೆ ನೀಡಿದರು.