ಕಳೆದ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಎಲ್.ಕೆ. ಆಡ್ವಾಣಿ ಅವರನ್ನು ಬಿಂಬಿಸುವುದಕ್ಕೆ ಅಪಸ್ವರ ಎತ್ತಿದ್ದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಕಾವತ್ ಅವರು, ಬಿಜೆಪಿಯಿಂದ ಉಚ್ಚಾಟಿತರಾಗಿರುವ ಜಸ್ವಂತ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜಸ್ವಂತ್ ಸಿಂಗ್ ಜಿನ್ನಾ ಕುರಿತು ಬರೆದಿರುವ ಪುಸ್ತಕವನ್ನು ಶ್ಲಾಘಿಸಿರುವ ಶೇಕಾವತ್, ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಜಸ್ವಂತ್ ತೊರೆಯುವಂತೆ ಬಿಜೆಪಿ ಹೇಳಿರುವುದನ್ನು ಖಂಡಿಸಿದ್ದಾರೆ.
"ಜಸ್ವಂತ್ ಅವರನ್ನು ನಡೆಸಿಕೊಂಡಿರುವ ರೀತಿ ಸರಿ ಇಲ್ಲ. ಪುಸ್ತಕವನ್ನು ಓದಿದ ಬಳಿಕ ಅವರನ್ನು ಹೊಗಳುವ ಅವಶ್ಯಕತೆ ಇದೆ ಎಂದು ನನಗನಿಸುತ್ತದೆ. ಅವರ ಪುಸ್ತಕವನ್ನು ಜಾಗರೂಕವಾಗಿ ಓದಿದರೆ ಅದು ಹೊಗಳಿಕೆಗೆ ಅರ್ಹ ಎಂಬುದು ತಿಳಿಯುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ. ಜಸ್ವಂತ್ ಸಿಂಗ್‌ರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಬಿಜೆಪಿ ಪಕ್ಷದ ಗುಣಮಟ್ಟದಲ್ಲಿ ಕುಸಿತವಾಗಿದೆ. ಅಶಿಸ್ತು ಹೆಚ್ಚಿದೆ. ಜನತೆಯ ಪ್ರಕಾರ ಜಸ್ವಂತ್ ಅವರು ಪಕ್ಷದೊಂದಿಗೆ ಇರಬೇಕಿತ್ತು. ಮತ್ತು ನಾನು ಜನತೆಯ ಅಭಿಪ್ರಾಯವನ್ನೇ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಜಸ್ವಂತ್ ಶೇಕಾವತ್ ಅವರನ್ನು ಭೇಟಿಯಾಗಲು ಗುರುವಾರ ತೆರಳಿದ್ದರು. "ನನಗೆ ಅವರು 1966ರಿಂದಲೇ ಗೊತ್ತು. ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ" ಎಂಬುದಾಗಿ 86ರ ಹರೆಯದ ಶೇಕಾವತ್ ಅವರನ್ನು ಭೇಟಿಯಾದ ಬಳಿಕ ಜಸ್ವಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾರ್ವಜನಿಕ ಲೆಕ್ಕಶಾಸ್ತ್ರ ಆಯೋಗವು ರಾಷ್ಟ್ರದ ಪ್ರಮುಖ ವಿರೋಧ ಪಕ್ಷದ ಕೈಯಲ್ಲೇ ಇರಬೇಕು ಎಂಬ ಬಿಜೆಪಿಯ ವಾದದ ಕುರಿತು ಜಸ್ವಂತ್ ಅವರಿಗೆ ಪ್ರಶ್ನೆ ಕೇಳಿದಾಗ ಮಧ್ಯಪ್ರವೇಶಿಸಿದ ಶೇಕಾವತ್, ಬಿಜೆಪಿ ನಾಯಕರು ಸಂಸದೀಯ ಸಂಪ್ರದಾಯ ಹಾಗೂ ನೀತಿಗಳನ್ನು ಗೌರವಿಸಬೇಕು ಎಂದು ನುಡಿದರು.
ಬಿಜೆಪಿಯ ನಾಯಕರೊಳಗೆ ಪರಸ್ಪರ ನಂಬುಗೆ ಕಡಿಮೆಯಾಗುತ್ತಿದ್ದು ಇದರಿಂದಾಗಿ ಪಕ್ಷದೊಳಗೆ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದಾಗಿ ಅವರು ಅಭಿಪ್ರಾಯಿಸಿದ್ದಾರೆ. ಬಿಜೆಪಿಗೆ ಸಲಹೆ ನೀಡುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸಲಹೆಯನ್ನು ಯಾಚಿಸಿದರೆ ನಿಡಲು ಸಿದ್ಧ, ಆದರೆ ತಾನಾಗಿಯೇ ಸಲಹೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇವೇಳೆ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 22ರಂದು ನಡೆಸಲುದ್ದೇಶಿಸಿರುವ ರ‌್ಯಾಲಿಯಲ್ಲಿ ಭಾಗವಹಿಸುವಂತೆ ಜಸ್ವಂತ್ ಶೇಕಾವತ್‌ರಿಗೆ ಆಹ್ವಾನ ನೀಡಿದ್ದು, ಶೇಕಾವತ್ ಇದಕ್ಕೆ ಒಪ್ಪಿಗೆ ನೀಡಿದರು.