ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡಿಸಿಎಂ, ಸಚಿವ ಸ್ಥಾನ- ಆಯ್ಕೆ ನಿಮ್ಮದು: ಜಗನ್‌ಗೆ ಕಾಂಗ್ರೆಸ್
(YSR | Congress | Jaganmohan Reddy | KVP Ramachandra Rao)
ಡಿಸಿಎಂ, ಸಚಿವ ಸ್ಥಾನ- ಆಯ್ಕೆ ನಿಮ್ಮದು: ಜಗನ್‌ಗೆ ಕಾಂಗ್ರೆಸ್
ನವದೆಹಲಿ, ಶುಕ್ರವಾರ, 11 ಸೆಪ್ಟೆಂಬರ್ 2009( 09:46 IST )
ಆಂಧ್ರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಇನ್ನೂ ಕೆಲವು ಸಮಯ ಇದೇ ರೀತಿ ಮುಂದುವರಿಯುವ ಸಾಧ್ಯತೆಗಳು ಗೋಚರಿಸುತ್ತಿದ್ದು, ಪರ-ವಿರೋಧ ಚೌಕಾಸಿಗಳು ನಡೆಯುತ್ತಿವೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ವೈ.ಎಸ್.ಆರ್. ಪುತ್ರ ಜಗನ್ಮೋಹನ್ ರೆಡ್ಡಿಯವರಿಗೆ ಉಪ ಮುಖ್ಯಮಂತ್ರಿ, ಕೇಂದ್ರ ಸಂಪುಟ ಸಚಿವ ಸ್ಥಾನ ಅಥವಾ ಪಕ್ಷದ ರಾಜ್ಯ ಘಟಕದಲ್ಲಿ ಪ್ರಮುಖ ಹುದ್ದೆ ನೀಡುವ ಪ್ರಸ್ತಾಪನ್ನು ಮುಂದಿಟ್ಟಿದ್ದು, ಯಾವುದಾದರೊಂದನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಪದವಿಯ ಆಸೆ ಬಿಡುವಂತೆ ಸಲಹೆ ನೀಡಿದೆ.
ದಿವಂಗತ ರಾಜಶೇಖರ ರೆಡ್ಡಿಯವರ ಆಪ್ತ ಸಲಹೆಗಾರರಾಗಿದ್ದ ಕೆವಿಪಿ ರಾಮಚಂದ್ರರಾವ್ ಮೂಲಕ ಈ ಆಯ್ಕೆಗಳನ್ನು ಹೈಕಮಾಂಡ್ ಜಗನ್‌ಗೆ ತಲುಪಿಸುವ ಪ್ರಯತ್ನ ಮಾಡಿದೆ. ರಾವ್ ಶುಕ್ರವಾರ ಹೈದರಾಬಾದ್‌ಗೆ ಬರಲಿದ್ದು, ಜಗನ್ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವುದೇ ವಿಚಾರವನ್ನು ಬಹಿರಂಗಪಡಿಸಲು ಕಾಂಗ್ರೆಸ್ ಮೂಲಗಳು ನಿರಾಕರಿಸಿವೆ.
ಗುರುವಾರ ನಡೆದ ಬೆಳವಣಿಗೆಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಜಗನ್‌ಗೆ ಮುಖ್ಯಮಂತ್ರಿ ಪಟ್ಟ ನೀಡಲು ಸುತರಾಂ ಸಿದ್ಧವಿಲ್ಲ. ಮೂಲಗಳ ಪ್ರಕಾರ ಉಸ್ತುವಾರಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಕೆ. ರೋಸಯ್ಯರವರನ್ನೇ ಮುಂದುವರಿಸಲು ಸೋನಿಯಾ ಗಾಂಧಿ ಒಲವು ತೋರಿಸುತ್ತಿದ್ದಾರೆ.
ಅಲ್ಲದೆ ಸೋನಿಯಾರಿಂದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ರೋಸಯ್ಯರವರಿಗೆ ಯಾವುದೇ ರೀತಿಯಲ್ಲಿ ಜಗನ್ ಬೆಂಬಲಿಗರು ಅಡ್ಡಿ ಪಡಿಸುವುದಾಗಲೀ ಅಥವಾ ಇಕ್ಕಟ್ಟಿಗೆ ಸಿಲುಕಿಸುವ ತಂತ್ರವನ್ನು ಮಾಡಕೂಡದು ಎಂದು ಹೈಕಮಾಂಡ್ ನಿರ್ದೇಶನ ನೀಡಿದೆ.
ಆದರೆ ಜಗನ್ ಗುಂಪು ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ತಮ್ಮ ಪ್ರಯತ್ನವನ್ನು ಮುಂದುವರಿಸಿದೆ. ಗುರುವಾರ ಕೇಂದ್ರ ಸಚಿವ ಎ. ಸಾಯಿ ಪ್ರತಾಪ್ ಮುಂದಾಳುತ್ವದಲ್ಲಿ 11 ಮಂದಿ ಕಾಂಗ್ರೆಸ್ ಸಂಸದರು ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಜಗನ್‌ಗೆ ಸೀಎಂ ಪಟ್ಟ ನೀಡುವಂತೆ ಒತ್ತಡ ಹೇರಿದೆ. ಈ ಗುಂಪಿನಲ್ಲಿ ಪಿ. ಪ್ರಭಾಕರ್, ನಂದಿ ಯೆಲ್ಲಯ್ಯ, ಎಂ. ರಾಜಮೋಹನ್ ರೆಡ್ಡಿ, ಕೆ. ಬಪಿರಾಜು ಮತ್ತು ಎ. ವೆಂಕಟ್ರಾಮ್ ರೆಡ್ಡಿ ಕಾಣಿಸಿದ್ದ ಪ್ರಮುಖರು.
ಅತ್ತ ಜಗನ್ ಮುಖ್ಯಮಂತ್ರಿಯಾಗಬಾರದು ಎಂದು ಒತ್ತಡ ಹೇರುವ ಕಾರ್ಯವೂ ಭರದಿಂದ ಸಾಗುತ್ತಿದೆ. ಅವರಲ್ಲಿ ಜೈಪಾಲ್ ರೆಡ್ಡಿ, ಕೆ.ಎಸ್. ರಾವ್, ರಾಯಪಟ್ಟಿ ಸಾಂಬಶಿವರಾವ್ ಮತ್ತು ಮಾಜಿ ಸಚಿವೆ ರೇಣುಕಾ ಚೌಧರಿ ಪ್ರಮುಖರು. ಜಗನ್‌ಗೆ ರಾಜಕೀಯ ಅನುಭವವಿಲ್ಲವೆನ್ನುವುದು ಅವರ ಪ್ರಮುಖ ತಕರಾರು.