ಜೈಲಿನ ಆಹಾರದಿಂದ ವಿದೇಶಿಯರಿಗ್ಯಾಕೆ ವಿನಾಯಿತಿ: ಹೈಕೋ ಪ್ರಶ್ನೆ
ಮುಂಬೈ, ಶುಕ್ರವಾರ, 11 ಸೆಪ್ಟೆಂಬರ್ 2009( 11:06 IST )
ಭಾರತೀಯ ಕೈದಿಗಳು ತಮ್ಮ ಆಯ್ಕೆಯ ಆಹಾರವನ್ನು ಪಡೆಯಲು ಸಾಧ್ಯವಿಲ್ಲ ಎಂದಾದರೆ, ವಿದೇಶಿ ಕೈದಿಗಳಿಗೆ ಯಾಕೆ ಈ ಕಾನೂನಲ್ಲಿ ವಿನಾಯಿತಿ ಎಂಬುದಾಗಿ ಬಾಂಬೆ ಹೈಕೋರ್ಟ್ ಗುರುವಾರ ಸರ್ಕಾರವನ್ನು ಪ್ರಶ್ನಿಸಿದೆ.
ಜೈಲಿನ ಕ್ಯಾಂಟೀನುಗಳಲ್ಲಿ ಆಹಾರ ವಸ್ತುಗಳ ಮಾರಾಟವನ್ನು ಸರ್ಕಾರ ಕಳೆದ ವರ್ಷ ನಿಷೇಧಿಸಿದೆ. ಮಹಾರಾಷ್ಟ್ರ ಜೈಲು ನಿಯಮದಲ್ಲಿ ಇದಕ್ಕೆ ಅವಕಾಶವಿದೆ. ಇದೇ ವೇಳೆ ಜೈಲಿನಲ್ಲಿ ಮಾಂಸಾಹಾರ ನೀಡುವುದನ್ನು ಸಹ ಅಧಿಕಾರಿಗಳು ನಿಲ್ಲಿಸಿದ್ದಾರೆ. ಆದರೆ ಮುಂಬೈ ಜೈಲುಗಳಲ್ಲಿರುವ ವಿದೇಶಿಗಳಿಗೆ ಕೊಂಚ ಉತ್ತಮವಾದ ಆಹಾರ ಸಿಗುತ್ತದೆ. ಅವರಿಗೆ ಬ್ರೆಡ್-ಬೆಣ್ಣೆ ಮತ್ತು ಮೊಟ್ಟೆಗಳನ್ನು ಒದಗಿಸಲಾಗುತ್ತದೆ.
ಜೈಲಿನ ಕ್ಯಾಂಟೀನುಗಳಲ್ಲಿ ಆಹಾರ ಮಾರಾಟಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ 1993ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ಸರ್ದಾರ್ ಶಹವಾಲಿ ಖಾನ್ ಎಂಬಾತ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯ ಮೇಲಿನ ಪ್ರಶ್ನೆಯನ್ನು ಕೇಳಿದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವೇಳೆ ವಿದೇಶಿಯರಿಗೆ ಬೇರೆಯಾದ ಆಹಾರ ನೀಡಲಾಗುತ್ತದೆ ಎಂಬ ವಿಚಾರ ತಿಳಿದಾಗ ಬಿಲಾಲ್ ನಾಜ್ಕಿ ಮತ್ತು ಎ.ಆರ್. ಜೋಷಿ ಅವರುಗಳನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಶ್ನೆ ಕೇಳಿದೆ.
ವಿದೇಶಿ ಕೈದಿಗಳು ಚಪಾತಿ ತಿನ್ನದ ಕಾರಣ ಆವರಿಗೆ ಬೇರೆ ಆಹಾರ ನೀಡಲಾಗುತ್ತದೆ ಎಂಬ ಸರ್ಕಾರಿ ವಕೀಲ ಉತ್ತರ ನ್ಯಾಯಪೀಠಕ್ಕೆ ತೃಪ್ತಿ ನೀಡಲಿಲ್ಲ.
"ನಿಮ್ಮ ನಿಯಮಗಳನ್ನು ಪರಿಷ್ಕರಿಸಿ. ಎಲ್ಲರ ರುಚಿ ಹಾಗೂ ಆಯ್ಕೆಗೆ ಅವಕಾಶ ನೀಡಿ. ಇಲ್ಲವಾದರೆ ನಾವು ಸುತ್ತೋಲೆಗೆ(ಕ್ಯಾಂಟೀನುಗಳಲ್ಲಿ ಆಹಾರ ಮಾರಾಟಕ್ಕೆ ನಿಷೇಧ ಹೇರಿರುವ) ತಡೆ ಹೇರುತ್ತೇವೆ" ಎಂಬ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿತು.