ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತಾರಿ ಹತ್ಯಾಕಾಂಡ: ಕೋಲಿಗೆ ಗಲ್ಲು, ಪಂಧೇರ್ ಖುಲಾಸೆ (Allahabad High Court | acquits Pandher | Nithari serial killing)
ಅಲಹಾಬಾದ್, ಶುಕ್ರವಾರ, 11 ಸೆಪ್ಟೆಂಬರ್ 2009( 12:41 IST )
ಇಡೀ ರಾಷ್ಟ್ರದಲ್ಲೇ ಸಂಚಲನ ಮೂಡಿಸಿದ್ದ ನಿತಾರಿ ಸರಣಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲೊಬ್ಬನಾದ ಸುರೀಂದರ್ ಕೋಲಿಗೆ ವಿಚಾರಣಾ ನ್ಯಾಯಾಲಯ ನೀಡಲಾಗಿದ್ದ ಮರಣದಂಡನೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಇದೇವೇಳೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೊನಿಂಧರ್ ಸಿಂಗ್ ಪಂಧೇರ್‌ನನ್ನು ಖಲಾಸೆ ಮಾಡಲಾಗಿದೆ.
ಪಂಧೇರ್ ಮೇಲಿರುವ ಎಲ್ಲಾ ಆರೋಪಗಳಿಂದ ಆತನನ್ನು ನ್ಯಾಯಾಲಯ ದೋಷಮುಕ್ತವಾಗಿಸಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಆತನಿಗೆ ಶಿಕ್ಷೆಯಾಗಿಲ್ಲ.
ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಸುರೀಂದರ್ ಕೋಲಿ ಅವರುಗಳು ವಿಚಾರಣಾ ನ್ಯಾಯಾಲಯ ನೀಡಿರುವ ಮರಣದಂಡನೆಯನ್ನು ಪ್ರಶ್ನಿಸಿ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಮೇಲ್ಮನವಿಯ ಕುರಿತ ತೀರ್ಪನ್ನು 2009 ಆಗಸ್ಟ್ 6ರಂದು ಅಲಹಾಬಾದ್ ಹೈಕೋರ್ಟ್ ಕಾದಿರಿಸಿತ್ತು.
ನೋಯ್ಡಾದ ನಿವಾಸಿಯಾಗಿರುವ ಉದ್ಯಮಿ ಪಂಧೇರ್ ಹಾಗೂ ಆತನ ಮನೆಗೆಲಸದಾಳು ಸುರೀಂದರ್ ಕೋಲಿಗೆ ಗಜಿಯಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯವು 2009ರ ಫೆಬ್ರವರಿ 13ರಂದು ಗಲ್ಲು ಶಿಕ್ಷೆ ವಿಧಿಸಿತ್ತು. 14ರ ಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿತ್ತು. ಇವರ ವಿರುದ್ಧ ಇನ್ನೂ ಹಲವು ಕೊಲೆ ಪ್ರಕರಣಗಳನ್ನು ಆರೋಪಿಸಲಾಗಿದ್ದು, ಇವುಗಳ ವಿಚಾರಣೆ ನಡೆಯುತ್ತಿದೆ.
ಇತರ ಹಲವು ಬಾಲಕಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದು, ಇವರನ್ನು ನಿತಾರಿಯಲ್ಲಿರುವ ಪಂಧೇರ್‍ನ ನಿವಾಸಕ್ಕೆ ಉಪಾಯವಾಗಿ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. 2006ರ ಡಿಸೆಂಬರ್‌ನಲ್ಲಿ ಈ ನಿವಾಸದ ಸುತ್ತಮುತ್ತ ಅಪಾರ ಪ್ರಮಾಣದಲ್ಲಿ ಮಾನವ ಮೂಳೆಗಳು ಪತ್ತೆಯಾಗಿದ್ದವು. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಬಳಿಕ ಸಿಬಿಐ ಪ್ರಕರಣದ ತನಿಖೆ ನಡೆಸಿತ್ತು.
ಉದ್ಯಮಿಯಾಗಿರುವ ಪಂಧೇರ್ ತನ್ನ ಮನೆಗೆಲಸದಾಳು ಕೋಲಿಯನ್ನು ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿತ್ತು. ಆತನ ಮನೆಯಲ್ಲಿ ಸರ್ಜಿಕಲ್ ಸಾಮಾಗ್ರಿಗಳು ಪತ್ತೆಯಾಗಿದ್ದು ಆತ ಬಾಲಕಿಯರನ್ನು ಬಳಸಿ ಕೊಲೆಮಾಡಿದ ಬಳಿಕ ಅಂಗಾಂಗಗಳ ಮಾರಾಟ ಮಾಡುತ್ತಿದ್ದ ಎಂದೂ ದೂರಲಾಗಿತ್ತು. ಪಂಧೇರ್‌ನದ್ದು ಅತ್ಯಂತ ದೊಡ್ಡದಾದ ಒಂಟಿ ಬಂಗಲೆಯಾಗಿದ್ದು, ಆತನಿಗೆ ದೊಡ್ಡದೊಡ್ಡ ವ್ಯಕ್ತಿಗಳ ಸಂಪರ್ಕವಿದ್ದು, ಅವರಿಗೆಲ್ಲ ಈತ ಅಮಾಯಕ ಹುಡುಗಿಯನ್ನು ಒದಗಿಸುತ್ತಿದ್ದ ಎಂಬ ದೂರುಗಳೂ ಕೇಳಿಬಂದಿದ್ದವು.
ಆದರೆ, ತಾನು ಮನೆಯಲ್ಲಿ ಇಲ್ಲದ ವೇಳೆ ತನ್ನ ಕೆಲಸದಾಳು ಈ ದುಷ್ಕೃತ್ಯವನ್ನು ಎಸಗಿದ್ದು, ತನಗೆ ಇದರ ಅರಿವಿಲ್ಲ ಎಂದೇ ಪಂಧೇರ್ ನ್ಯಾಯಾಲಯದಲ್ಲಿ ವಾದಿಸಿದ್ದ. ಇದೀಗ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನಿಗೆ ವಿಧಿಸಲಾಗಿದ್ದ ಶಿಕ್ಷೆಯಿಂದ ಆತ ಮುಕ್ತನಾಗಿದ್ದಾನೆ.