ನವದೆಹಲಿ, ಶುಕ್ರವಾರ, 11 ಸೆಪ್ಟೆಂಬರ್ 2009( 13:38 IST )
ಮುಸ್ಲಿಂ ವಿದ್ಯಾರ್ಥಿಯ 'ದಾಡಿ ಹಕ್ಕಿನ' ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಪ್ರದೇಶದ ಕಾನ್ವೆಂಟ್ ಶಾಲೆಯೊಂದಕ್ಕೆ ಹೊಸ ನೋಟೀಸು ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ಎನ್. ಅಗರ್ವಾಲ್ ಹಾಗೂ ಜಿ.ಎಸ್. ಸಿಂಘ್ವಿ ಅವರನ್ನೊಳಗೊಂಡಿರುವ ನ್ಯಾಯಪೀಠವು, ವಿದ್ಯಾರ್ಥಿಯನ್ನು ಶಾಲೆಯಿಂದ ತೆಗೆದು ಹಾಕುವ ನಿರ್ಮಲಾ ಕಾನ್ವೆಂಟ್ ನಿರ್ಧಾರವನ್ನು 'ಹಾಸ್ಯಾಸ್ಪದ' ಎಂದು ಹೇಳಿದೆ.
ಸುಪ್ರೀಂ ಕೋರ್ಟಿನ ಇನ್ನೊಂದು ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದ್ದ ಬಳಿಕ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಪ್ರಸಕ್ತ ನ್ಯಾಯಪೀಠವು ಮಧ್ಯಪ್ರದೇಶದ ನಿರ್ಮಲಾ ಕಾನ್ವೆಂಟ್ ಹೈಸ್ಕೂಲ್‌ಗೆ ಈ ನೋಟೀಸ್ ನೀಡಿದೆ.
ನ್ಯಾಯಾಧೀಶರುಗಳಾದ ಆರ್.ವಿ. ರವೀಂದ್ರನ್ ಹಾಗೂ ಮಾರ್ಕಾಂಡೇಯ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠವು ಮೊದಲಿಗೆ ವಿದ್ಯಾರ್ಥಿಯ ಅರ್ಜಿಯನ್ನು ವಜಾಗೊಳಿಸಿತ್ತು. ಆ ಸಂದರ್ಭದಲ್ಲಿ ನ್ಯಾಯಾಮೂರ್ತಿ ಕಟ್ಜು ಅವರು ಗಡ್ಡಧರಿಸಲು ಅವಕಾಶ ನೀಡುವ ಮೂಲಕ ತಾಲಿಬಾನೀಕರಣ ಮಾಡಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು.
ಬಳಿಕ ವಿದ್ಯಾರ್ಥಿಯು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದ ಬಳಿಕ ಕಟ್ಜು ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಅರ್ಜಿಯ ವಜಾಗೊಳಿಸುವಿಕೆಯನ್ನು ಹಿಂಪಡೆದಿದ್ದು, ಮರುವಿಚಾರಣೆಗೆ ಸೂಚಿಸಿದ್ದರು.