ಶುಕ್ರವಾರ ರಾತ್ರಿ ಪಾಕಿಸ್ತಾನಿ ಪಡೆಗಳು ಭಾರತೀಯ ಭೂ ಪ್ರದೇಶದ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೆಷಿನ್ ಗನ್‌ಗಳಿಂದ ಪ್ರತಿ ದಾಳಿ ನಡೆಸಿದೆ. ಆದರೆ ರಾಕೆಟ್ ದಾಳಿ ನಡೆಸಿರುವುದನ್ನು ಪಾಕಿಸ್ತಾನ ನಿರಾಕರಿಸಿದೆ.
ಶುಕ್ರವಾರ ರಾತ್ರಿ ಪಾಕಿಸ್ತಾನದ ಗಡಿ ಭದ್ರತಾ ಪಡೆಗಳು ಪಂಜಾಬ್‌ನ ಹಳ್ಳಿಗಳತ್ತ ಎರಡು ರಾಕೆಟ್ ದಾಳಿ ನಡೆಸಿದ್ದವು. ಇದು ಕಳೆದೆರಡು ತಿಂಗಳುಗಳಲ್ಲಿ ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಎರಡನೇ ಅನಪೇಕ್ಷಿತ ದಾಳಿಯಾಗಿತ್ತು. ಇದಕ್ಕೆ ಭಾರತೀಯ ಪಡೆಗಳು ಮೆಷಿನ್ ಗನ್‌ಗಳಿಂದ ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಮೂಲಗಳು ತಿಳಿಸಿವೆ.
ಗಡಿ ಭಾಗದ ಭಾರತೀಯ ಪ್ರದೇಶದ ಮೇಲೆ ಹೆಚ್ಚಿನ ರಾಕೆಟ್ ದಾಳಿ ನಡೆಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಶನಿವಾರ ಬಿಎಸ್‌ಎಫ್ ಮುಂದಾಗಿದೆ. ಎರಡು ದಾಳಿಗಳನ್ನು ನಡೆಸಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಯಾಗಿ ನಾವು ಮೆಷಿನ್ ಗನ್‌ಗಳಿಂದ ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ಪ್ರಬಲ ಪ್ರತಿರೋಧದ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಾಗೀರ್ ಸಿಂಗ್ ತಿಳಿಸಿದ್ದಾರೆ.
ಅಮೃತಸರ ಜಿಲ್ಲೆಯಲ್ಲಿನ ಅತ್ತಾರಿ-ವಾಘಾ ಚೆಕ್‌ಪೋಸ್ಟ್ ಗಡಿ ಭಾಗದಲ್ಲಿನ ನಿವಾಸಿಗಳು ತಮ್ಮ ಜಮೀನುಗಳಲ್ಲಿ ರಾಕೆಟ್‌ಗಳು ಬಿದ್ದಿರುವುದನ್ನು ಬಿಎಸ್‌ಎಫ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂದು ಬಿಎಸ್‌ಎಫ್ ಮುಖ್ಯ ಇನ್ಸ್‌ಪೆಕ್ಟರ್ ಹಿಮ್ಮತ್ ಸಿಂಗ್ ವಿವರಣೆ ನೀಡಿದ್ದಾರೆ.
ಹೆಚ್ಚಿನ ರಾಕೆಟ್ ದಾಳಿಗಳನ್ನು ನಡೆಸಲಾಗಿದೆಯೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ನಾವು ಮೆಷಿನ್ ಗನ್ ದಾಳಿ ಮಾಡಿ ತಕ್ಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಜುಲೈ ಐದರಂದು ರಾತ್ರಿ ಕೂಡ ಪಾಕಿಸ್ತಾನವು ಗಡಿ ನಿಯಮಗಳನ್ನು ಉಲ್ಲಂಘಿಸಿ ಮೂರು ರಾಕೆಟ್ ದಾಳಿಗಳನ್ನು ಭಾರತದ ಭೂ ಪ್ರದೇಶದ ಮೇಲೆ ನಡೆಸಿತ್ತು. ಧಾಂದೇ, ಬಹೇರ್ವಾಲ್ ಮತ್ತು ಕೊನಾಕೆ ಪ್ರದೇಶದ ಮೇಲೆ ಪಾಕ್ ರಾಕೆಟ್ ಉಡಾಯಿಸಿತ್ತು.
ನಿರಾಕರಿಸಿದ ಪಾಕ್.. ತಾನು ಯಾವುದೇ ದಾಳಿ ನಡೆಸಿರುವುದನ್ನು ಪಾಕಿಸ್ತಾನ ನಿರಾಕರಿಸಿದೆ. ಭಾರತೀಯ ಪಡೆಗಳ ಆರೋಪವನ್ನು ಶನಿವಾರ ತಳ್ಳಿ ಹಾಕಿರುವ ಪಾಕ್ ಗಡಿ ಭದ್ರತಾ ಪಡೆಗಳು, ವಾಘಾ ಗಡಿಯಾದ್ಯಂತ ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದಿವೆ.
ಶನಿವಾರ ಪಾಕಿಸ್ತಾನ ರೇಂಜರ್ಸ್ ಮತ್ತು ಬಿಎಸ್‌ಎಫ್ ನಡುವೆ ನಡೆದ ಮಾತುಕತೆಯು ಈ ಸಂಬಂಧ ಯಾವುದೇ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಅತೃಪ್ತಿಯಿಂದಲೇ ಸಭೆಯು ಮುಕ್ತಾಯವಾಯಿತು. ಭಾರತವು ತನ್ನ ಸಂಪೂರ್ಣ ಅಸಮಾಧಾನವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.