ರಾಜೀವ್ ಗಾಂಧಿ ಹತ್ಯಾಪ್ರಕರಣದ ಆರೋಪಿಯಾಗಿರುವ ನಳಿನಿ ಕಳೆದ 18 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವಧಿಪೂರ್ಣ ಬಿಡುಗಡೆಗಾಗಿ ಮದ್ರಾಸ್ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಾಳೆ. ರಾಜೀವ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಹಾಗೂ ಇತರ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಆಕೆಗೆ ವಿಧಿಸಿರುವ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಗಿತ್ತು.
ತಾನು 2000ರ ಎಪ್ರಿಲ್ 24ರಂದು ಸಲ್ಲಿಸಿರುವ ದಯಾಭಿಕ್ಷೆಯ ಅರ್ಜಿಯನ್ನು ತಮಿಳ್ನಾಡು ರಾಜ್ಯಪಾಲರು ಪರಿಗಣಿಸಿದ್ದು, ಇದರನ್ವಯ ರಾಜ್ಯ ಸರ್ಕಾರವು ಆಕೆಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.
ನಳಿನಿಯನ್ನು ಕ್ಷಮಿಸುವುದರಲ್ಲಿ ತನಗೆ ಯಾವುದೇ ಆಕ್ಷೇಪವಿಲ್ಲ ಎಂಬುದಾಗಿ ರಾಜೀವ್ ಗಾಂಧಿ ಪತ್ನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ, ಅಲ್ಲದೆ ಪ್ರಿಯಾಂಕಾ ಗಾಂಧಿ ತನ್ನನ್ನು ವೆಲ್ಲೂರು ಜೈಲಿನಲ್ಲಿ ಭೇಟಿಯಾಗಿದ್ದರು ಎಂದು ನಳಿನಿ ತನ್ನ ಅರ್ಜಿಯಲ್ಲಿ ಹೇಳಿದ್ದಾಳೆ.
ಅವಧಿ ಪೂರ್ಣ ಬಿಡುಗಡೆಗೆ ಅವಶ್ಯವಿರುವ 14 ವರ್ಷಗಳ ಪೂರೈಸುವಿಕೆಯು ಸಿಆರ್‌ಪಿಸಿಯ ಸೆಕ್ಷನ್433(ಎ) ಪ್ರಕಾರ ಅವಶ್ಯವಾಗಿದ್ದು, 2005ರ ಜೂನ್ 18ರಿಂದ ತಾನು ಅವಧಿಪೂರ್ವ ಬಿಡುಗಡೆಗೆ ಅರ್ಹಳಾಗಿದ್ದೇನೆ ಎಂಬುದಾಗಿ ಆಕೆ ತನ್ನ ಅರ್ಜಿಯಲ್ಲಿ ಹೇಳಿದ್ದಾಳೆ. ತನ್ನ ಹೆಸರು 2005, 2006 ಮತ್ತು 2007ರಲ್ಲಿ ಅವಧಿಪೂರ್ವ ಬಿಡುಗಡೆಗೆ ಪರಿಗಣಿಸದಿರುವ ಕಾರಣ ತನ್ನ ಶೀಘ್ರ ಬಿಡುಗಡೆಯನ್ನು ಪರಿಗಣಿಸಬೇಕು ಎಂಬುದಾಗಿ ನಳಿನಿ ರಾಜ್ಯಸರ್ಕಾರವನ್ನು ವಿನಂತಿಸಿದ್ದಳು. ಆದರೆ ಆಕೆಯ ಅರ್ಜಿಯನ್ನು ರಾಜ್ಯ ಸರ್ಕಾರ 2007ಕ ಅಕ್ಟೋಬರ್ 31ರಂದು ತಿರಸ್ಕರಿಸಿತ್ತು.
ಈ ತಿರಸ್ಕಾರ ಅದೇಶವನ್ನು ರದ್ದುಗೊಳಿಸಿ ಆಕೆಯ ಬಿಡುಗಡೆಗೆ ಆದೇಶ ನೀಡಬೇಕು ಎಂಬುದಾಗಿ ತಾನು ಹೈಕೋರ್ಟಿಗೆ ಮನವಿ ಮಾಡಿರುವುದಾಗಿ ಹೇಳಿದ್ದಾಳೆ. ಹೈ ಕೋರ್ಟ್ ಸಲಹಾ ಮಂಡಳಿಯ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.