ಅತ್ಯಂತ ಕೆಟ್ಟ ಹವೆಯ ಈ ಪರಿಸ್ಥಿತಿಯಲ್ಲಿ ಹೆಲಿಕಾಫ್ಟರ್ ಪ್ರಯಾಣ ಮಾಡಬೇಡಿ ಎಂಬುದಾಗಿ ಇತ್ತೀಚೆಗೆ ದುರಂತ ಅಂತ್ಯ ಕಂಡಿರುವ ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಅವರ ಪತ್ನಿ ವಿನಂತಿಸಿದ್ದರಂತೆ. ಆದರೆ ಪತ್ನಿಯ ವಿನಂತಿಗೆ ರೆಡ್ಡಿ ನಕ್ಕುಬಿಟ್ಟಿದ್ದರು.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರೆಡ್ಡಿ ಅವರು ಚಿತ್ತೂರಿಗೆ ಮುಂಜಾನೆ 7.20ಕ್ಕೆ ತೆರಳಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಹಾರಾಟವನ್ನು 8.35ಕ್ಕೆ ಮುಂದೂಡಲಾಗಿತ್ತು. ಈ ಸಂದರ್ಭದಲ್ಲಿ ರೆಡ್ಡಿ ಪತ್ನಿ ವಿಜಯಲಕ್ಷ್ಮಿ ಅವರು ಕಾರ್ಯಕ್ರಮ ರದ್ದುಪಡಿಸುವಂತೆ ಕೋರಿದ್ದರು. ಆದರೆ ಎಂದಿನಂತೆ ವಿಶ್ವಾಸಭರಿತರಾಗಿದ್ದ ರೆಡ್ಡಿ ಮಾತ್ರ, ಫೈಲಟ್ ಓ.ಕೆ ಅಂದರೆ ಮಾತ್ರ ತೆರಳುತ್ತೇನೆ ಎಂದು ಪತ್ನಿಯನ್ನು ಸಮಾಧಾನಪಡಿಸಿ ನಕ್ಕಿದ್ದರಂತೆ. ಬಹುಶಃ ಪತ್ನಿಯೊಂದಿಗಿನ ಕೊನೆಯ ನಗು ಅದುವೇ ಆಗಿರಬೇಕು. ಹೀಗೆ ಹೊರಟ ರೆಡ್ಡಿಯವರು ಮನೆಗೆ ಮರಳಿದ್ದು, ಸುಟ್ಟುಕರಕಲಾದ ಛಿದ್ರಛಿದ್ರ ದೇಹವಾಗಿ.
ಅವರ ಸಾವಿನ ಶೋಕದಿಂದ ಚೇತರಿಸಿಕೊಳ್ಳುತ್ತಿರುವ ಅವರ ಸ್ನೇಹಿತರು, ತಮ್ಮ ಸ್ನೇಹಿತ ಹಾಗೂ ಮಾರ್ಗದರ್ಶಿಯ ನಷ್ಟವನ್ನು ಅನುಭವಿಸುತ್ತಿದ್ದು, ಮನೆಯೊಡತಿಯ ಮಾತನ್ನು ರೆಡ್ಡಿಯವರು ಕೇಳುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಆದರೆ, ವಿಧಿಯ ಆಟ ಬೇರೆಯದ್ದೇ ಆಗಿತ್ತಲ್ಲ. ಕೆಟ್ಟ ಹವಾಮಾನವೆಂದು ತಿಳಿದಿದ್ದರೂ ಪೈಲಟ್‌ಗೆ ದೊಡ್ಡವರ ಮಾತನ್ನು ತೆಗೆದುಹಾಕಲು ಕಷ್ಟವಾಯಿತೋ? "ಇದು ವಿಧಿಯಾಟವಲ್ಲದಿದ್ದರೆ ಅವರು ಚಿತ್ತೂರಿನತ್ತ ಹಾರುತ್ತಿರಲಿಲ್ಲ. ಪೈಲಟ್ ಗುಡ್ಡದತ್ತ ಹಾರುವ ಬದಲಿಗೆ ಗದ್ದೆಯತ್ತ ಹಾರುತ್ತಿದ್ದ" ಎಂಬುದಾಗಿ ಕಣ್ಣೀರು ತುಂಬಿಕೊಂಡ ರೆಡ್ಡಿಯವರ ಸಹಚರರೊಬ್ಬರು ಹೇಳುತ್ತಾರೆ.