ಪ್ರಾಂಶುಪಾಲನೊಬ್ಬ 9ನೆ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ವರದಿಯಾಗಿದೆ. ಉತ್ತರ ಪ್ರದೇಶದ ಮಾನು ಜಿಲ್ಲೆಯ ಯು.ಎಂ. ಮಾಂಟೆಸ್ಸರಿ ಶಾಲೆಯ ಪ್ರಾಂಶುಪಾಲ ಪ್ರಮೋದ್ ಕುಮಾರ್ ಗೌರ್(45) ಎಂಬಾತ ಈ ದುಷ್ಕೃತ್ಯ ಎಸಗಿರುವುದಾಗಿ ದೂರಲಾಗಿದೆ.
14ರ ಹರೆಯದ ಬಾಲಕಿಯನ್ನು ತನ್ನ ಕೊಠಡಿಗೆ ಕರೆದಿರುವ ಆತ ಆಕೆಯನ್ನು ಬಲವಂತವಾಗಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕಿರುಕುಳ ನೀಡಿದ್ದಲ್ಲದೆ, ಈ ವಿಚಾರವನ್ನು ಯಾರಬಳಿಯಾದರೂ ಬಾಯ್ಬಿಟ್ಟುದೇ ಆದರೆ ಪರಿಸ್ಥಿತಿ ನೆಟ್ಟಗಿರಲಾರದು ಎಂಬುದಾಗಿ ಧಮ್ಕಿ ಬೇರೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಹುಡುಗಿಯ ಹೆತ್ತವರಿಗೆ ಈ ವಿಚಾರ ತಿಳಿದಾಗ ಅವರು ಇತರರೊಂದಿಗೆ ಸೇರಿ ಗೌರ್‌ನ ಕಚೇರಿಗೆ ಮುತ್ತಿಗೆ ಹಾಕಿದರು. ಆದರೆ ಚಾಣಾಕ್ಷ ಗೌರ್ ಶಾಲೆಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ" ಎಂದು ಪೊಲೀಸಧಿಕಾರಿ ವೈ.ಪಿ. ಸಿಂಗ್ ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥರ ಆದೇಶದಂತೆ ಪ್ರಾಂಶುಪಾಲರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಗೌರ್ ಎಲ್ಲಿ ಅಡಗಿದ್ದಾನೆಂಬುದನ್ನು ಪತ್ತೆ ಹಚ್ಚಲು ಆತನಿಗೆ ನಿಕಟವಾಗಿರುವ ಶಾಲೆಯ ಕೆಲವು ಹಿರಿಯ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.