ಕಾಂಗ್ರೆಸ್ ಸಚಿವರೆಲ್ಲ ಸಾರ್ವಜನಿಕವಾಗಿ ಸರಳ ಜೀವನವನ್ನು ಅಳವಡಿಸಿಕೊಳ್ಳಬೇಕು, ವಿಮಾನ ಪ್ರಯಾಣ ಮಾಡುವ ವೇಳೆಗೆ ಇಕಾನಮಿ ದರ್ಜೆಯಲ್ಲೇ ಪ್ರಯಾಣಿಸಿ ಎಂಬುದಾಗಿ ಸೂಚನೆ ನೀಡಿದ್ದ ಪ್ರಣಬ್ ತಾನು ಇಕಾನಮಿ ದರ್ಜೆಯಲ್ಲೇ ಪ್ರಯಾಣಿಸಿ ನುಡಿದಂತೆ ನಡೆದಿದ್ದಾರೆ.
ಶನಿವಾರ ದೆಹಲಿಯಿಂದ ಕೋಲ್ಕಾತಾಗೆ ವಿಮಾನದಲ್ಲಿ ಪ್ರಯಾಣಿಸಿದ ಅವರು ಇಕಾನಮಿ ದರ್ಜೆಯಲ್ಲೇ ಪ್ರಯಾಣಿಸಿದರು. "ಇದು ನಂಗೇನು ಹೊಸತಲ್ಲ. ಚುನಾವಣಾ ಸಂದರ್ಭಗಳಲ್ಲಿ ಮತ್ತು ವಾಣಿಜ್ಯ ವಿಮಾನಗಳಲ್ಲಿ ಹಾರಾಡುವಾಗೆಲ್ಲ ನಾನು ಹೀಗೆಯೇ ಪ್ರಯಾಣಿಸುತ್ತೇನೆ. ಹೆಚ್ಚೂಕಮ್ಮಿ ಯಾವಾಗಲೂ ನಾನು ಈ ದರ್ಜೆಯಲ್ಲೇ ಪ್ರಯಾಣಿಸುವ ಕಾರಣ ಇದರಲ್ಲಿ ಹೊಸತೇನಿಲ್ಲ" ಎಂದು ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಅವರು ಭಾನುವಾರ ಮರಳಲಿದ್ದು, ಆ ವೇಳೆಯೂ ಅವರು ಏರ್ ಇಂಡಿಯಾ ವಿಮಾನದ ಇಕಾನಮಿ ದರ್ಜೆಯಲ್ಲೇ ಪ್ರಯಾಣಿಸಲಿದ್ದಾರೆ ಎಂದು ಅವರು ಕಚೇರಿಯ ಮೂಲಗಳು ತಿಳಿಸಿವೆ.
ಸೈಪ್ರಸ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸಚಿವರ ಸಭೆಗೆ ಅವರು ವಿಶೇಷ ವಿಮಾನದಲ್ಲಿ ತೆರಳಲು ಉದ್ದೇಶಿಸಿದ್ದರು. ಆದರೆ, ಅವರೀಗ ಭೇಟಿಯನ್ನೇ ರದ್ದು ಮಾಡಲೂ ಬಹುದು ಎಂಬುದಾಗಿ ಮೂಲಗಳು ಹೇಳಿವೆ. ಟರ್ಕಿಯಲ್ಲಿ ನಡೆಯಲಿರುವ ವಿಶ್ವಬ್ಯಾಂಕಿನ ಸಭೆಗೆ ಪ್ರಣಬ್ ತೆರಳಿದರೂ ಅವರು ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸಲಿದ್ದಾರೆ ಎಂದು ಹೇಳಲಾಗಿದೆ.
ಸರಳತೆಯ ಕ್ರಮಗಳನ್ನು ಸಚಿವರು ಅನುಸರಿಸಬೇಕು ಎಂಬುದಾಗಿ ಗುರವಾರದ ಸಂಪುಟ ಸಭೆಯಲ್ಲಿ ವಿವರಿಸಿದ್ದು, ಇದು ಅವರ ಸಹೋದ್ಯೋಗಿಗಳಿಂದ ಪ್ರಶ್ನೆಗೀಡಾಗಿತ್ತು. ಎಲ್ಲಾ ಸಚಿವರು ವಿಮಾನ ಪ್ರಯಾಣ ಮಾಡುವ ವೇಳೆ ಇಕಾನಮಿ ದರ್ಜೆಯಲ್ಲೇ ಪ್ರಯಾಣ ಮಾಡಬೇಕು ಹಾಗೂ ಪಂಚತಾರ ಹೋಟೇಲುಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಬಾರದು ಎಂದು ಹೇಳಿದ್ದರು.