ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ಸಂಜೆಯಿಂದ ಉತ್ತರ ಪ್ರದೇಶಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು ಮರಗಳು ಬುಡಮೇಲಾಗಿ ಉರುಳಿವೆ. ಮರಗಳು ಹಾಗೂ ಗೋಡೆಗಳು ಅಲ್ಲಲ್ಲಿ ಉರುಳಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ ಎಂಬುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಒಬ್ಬ ಮಹಿಳೆ ಹಾಗೂ ಮೂರು ಮಕ್ಕಳು ಸೇರಿದಂತೆ ಐದು ಮಂದಿ ಬಹ್ರೈಚ್ ಜಿಲ್ಲೆಯಲ್ಲಿ, ಮತ್ತೆ ಐದು ಮಂದಿ ಹರ್ಡೋಯ್, ನಾಲ್ವರು ಉನ್ನಾವೊ ಇಬ್ಬರು ಬಾರಾಬಂಕಿ ಜಿಲ್ಲೆಗಳಲ್ಲಿ, ಸಿಡಿಲು, ಗೋಡೆ ಕುಸಿತ, ಮರ ಉರುಳುವಿಕೆ ಮುಂತಾದ ನಾನಾ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ.
ಲಖಿಂಪುರ ಖೇರಿ ಜಿಲ್ಲೆಯ ಪಲ್ಲಿಕಲನ್ ಎಂಬಲ್ಲಿ 157.8 ಮಿಲಿಮೀಟರ್, ಸಿತಾಪುರ ಜಿಲ್ಲೆಯ ಭಟ್ಪೂರ್ವಾದಲ್ಲಿ 107.9 ಮಿಲಿಮೀಟರ್ ಮಳೆ ಸುರಿದಿದೆ. ಉಳಿದ ಪ್ರದೇಶಗಳಲ್ಲೂ ಭಾರೀ ಮಳೆಯಾಗಿರುವ ವರದಿಯಾಗಿದೆ.