ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಶ್ರತ್ ಪ್ರಕರಣ ಕುರಿತು ಚಿದು ಹೇಳಿಕೆಗೆ ಬಿಜೆಪಿ ಟೀಕೆ (BJP | Ishrat | Chidambaram | encounter)
 
PTI
ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಪಿ.ಚಿದಂಬರಂ ಅವರು ವಾಶಿಂಗ್ಟನ್‌ನಲ್ಲಿ ನೀಡಿರುವ ಹೇಳಿಕೆಯನ್ನು ಸಂಕುಚಿತ ಮನೋಭಾವದ್ದು ಎಂಬುದಾಗಿ ಟೀಕಿಸಿರುವ ಬಿಜೆಪಿಯು, ಇಂತಹ ಹೇಳಿಕೆಯನ್ನು ಸಚಿವರಿಂದ ಅದೂ ವಿದೇಶಿ ನೆಲದಿಂದ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಗುಜರಾತ್ ಸರ್ಕಾರವು ಇಶ್ರತ್ ಹಾಗೂ ಇತರರ ಎನ್‌ಕೌಂಟರ್ ಅನ್ನು ಗುಜರಾತ್ ಸರ್ಕಾರ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚಿದಂಬರಂ ಹೇಳಿದ್ದರು.

ಗುಜರಾತ್ ಎನ್‌ಕೌಂಟರ್ ಬಗ್ಗೆ ಕೇಂದ್ರದ ಗೃಹ ಸಚಿವರು ನ್ಯೂಯಾರ್ಕನಲ್ಲಿ ನೀಡಿರುವ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ. ಬೆಂಗಳೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ನೆಲದಲ್ಲಿ ರಾಷ್ಟ್ರದ ರಾಜ್ಯವೊಂದರ ಬಗ್ಗೆ ತೀರ ಲಘುವಾಗಿ ಮಾತನಾಡುವ ಮೂಲಕ ಗೃಹ ಸಚಿವರು ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರದ ಗೃಹ ಸಚಿವರ ಈ ಹೇಳಿಕೆ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ದಮನ ಮಾಡಲು ನೆರವಾಗುತ್ತದೆ. ದೇಶದ ಭದ್ರತೆ ಜೊತೆ ಆಟ ಸಲ್ಲದು ಎಂದು ಹೇಳಿದ ಅವರು, ಗುಜರಾತ್ನಲ್ಲಿ ಬಿಜೆಪಿ ಸರ್ಕಾರವಿದೆ ಎನ್ನುವ ಕಾರಣಕ್ಕೆ ಅಲ್ಲಿನ ಪ್ರತಿ ಘಟನೆಯನ್ನು ವೈಭವೀಕರಣಗೊಳಿಸಲಾಗುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನಲ್ಲಿ ನಡೆದಿರುವ ಎನ್‌ಕೌಂಟರ್‌ಗಳ ಸಂಖ್ಯೆ ಕಡಿಮೆ ಎಂದು ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಮೃತರಾದ ಯುವತಿ ಹಾಗೂ ಇನ್ನೋರ್ವನ ಬಂಧುಗಳು ಅವರು ಯಾಕೆ ಪಾಕಿಸ್ತಾನಿಗಳೊಂದಿಗೆ ಇದ್ದರು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಇಶ್ರತ್ ಭಯೋತ್ಪಾದಕಿ ಎಂಬುದಾಗಿ ಊಹಿಸಿದರೂ, ಜಾವೇದ್ ಶೇಕ್ ಅಲಿಯಾಸ್ ಪ್ರಣೇಶ್ ಪಿಳ್ಳೈ ಬಳಿ ಎರಡು ಪಾಸ್ಪೋರ್ಟ್‌ಗಳಿದ್ದು ಆತ ಲಷ್ಕರೆ ಉಗ್ರರನ್ನು ಭೇಟಿಯಾಗಲು ಒಮನ್‌ಗೆ ತೆರಳಿದ್ದ ಎಂಬುದಾಗಿ ನಾಯ್ದು ಹೇಳಿದರು.

ಇಶ್ರತ್ ಜಾವೇದ್‌ನೊಂದಿಗೆ ಲಕ್ನೋ, ಆಗ್ರಾ ಮತ್ತು ಮತ್ತಿತರ ನಗರಗಳಿಗೆ ಗಂಡಹೆಂಡತಿಯರಂತೆ ತೆರಳಿದ್ದರು ಎಂಬುದಾಗಿ ಗುಪ್ತಚರ ಮಾಹಿತಿಗಳು ಹೇಳಿವೆ ಎಂದು ನಾಯ್ಡು ನುಡಿದರು
.
ಇದೇ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ರಾಜ್ಯಪಾಲರ ಹೇಳಿಕೆಯ ಕುರಿತು ಬಹಳ ದಿನಗಳ ಬಳಿಕ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಹೀಗೆ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಹೇಳಿದ್ದರೆ ಅವರು ನಿಷ್ಪಕ್ಷಪಾತವಾಗಿಲ್ಲ ಎಂದು ಹೇಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಯಾವುದೇ ರಾಜ್ಯಪಾಲರು ಬಹಿರಂಗ ಹೇಳಿಕೆ ನೀಡುವುದು ತಪ್ಪು ಅದನ್ನು ವ್ಯಕ್ತಪಡಿಸಲು ಅವರದೇ ಆದ ದಾರಿಗಳಿವೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ