ಬೆಂಗಳೂರು, ಭಾನುವಾರ, 13 ಸೆಪ್ಟೆಂಬರ್ 2009( 15:12 IST )
WD
ಚಂದ್ರಯಾನ-1 ಅಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ(ಇಸ್ರೋ) ವಿರುದ್ಧದ ಟೀಕೆಯನ್ನು ಭಾರತೀಯ ಮಾಧ್ಯಮಗಳು ನಿಲ್ಲಿಸಬೇಕು ಎಂದು ಹೇಳಿರುವ ಯುರೋಪ್ ಬಾಹ್ಯಾಕಾಶ ವಿಜ್ಞಾನಿಯೊಬ್ಬರು, ಇದರ ಬದಲಿಗೆ ಚಂದ್ರಯಾನದ ಯಶಸ್ಸನ್ನು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.
ಚಂದ್ರಯಾನದ ಬದುಕು ಅಲ್ಪಾವಧಿಗೆ ಇಳಿದಿದ್ದರೂ ಇಸ್ರೋದ ಚಂದ್ರಯಾನ-1 ಒಂದು ಅದ್ಭುತವಾದ ಯಶಸ್ಸು ಎಂಬುದಾಗಿ ಯುರೋಪಿನ ಚಂದ್ರಯಾನ-1ರ ವಿಜ್ಞಾನಿ ಡೆಟ್‌ಲೆಫ್ ಕೋಶ್ಚಿನಿ ಅವರು ಇ-ಮೇಲ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಚಂದ್ರಯಾನವು ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಮೂರು ವೈಜ್ಞಾನಿಕ ಪೇಲೋಡ್‌ಗಳನ್ನು ಹೊತ್ತೊಯ್ದಿತ್ತು.
ತಮಗೆ ಲಭಿಸಿದ ಫಲಿತಾಂಶದಿಂದ ಯುರೋಪಿನ ಎಲ್ಲಾ ತಂಡಗಳು ಅತ್ಯಂತ ಸಂಭ್ರಮಗೊಂಡಿರುವುದಾಗಿ ಅವರು ಹೇಳಿದ್ದಾರೆ. "ಇಸ್ರೋವನ್ನು ತೆಗಳುವುದನ್ನು ಭಾರತೀಯ ವಿಜ್ಞಾನಿಗಳು ನಿಲ್ಲಿಸಬೇಕು. ಬದಲಿಗೆ, ನಿಮ್ಮ ಬಾಹ್ಯಾಕಾಶ ಸಂಸ್ಥೆಯು ಮಾಡಿರುವ ಅದ್ಭುತ ಯಶಸ್ಸುಗಳನ್ನು ಸ್ವೀಕರಿಸುವ ಕೆಲಸ ಮಾಡಬೇಕು" ಎಂಬುದಾಗಿ ಅವರು ಹಲವು ಸಾಧನೆಗಳ ಪಟ್ಟಿ ಮಾಡಿದ್ದಾರೆ.
"ನೀವು ಚಂದ್ರನ ಬಳಿಗೆ ಆಕಾಶನೌಕೆಯನ್ನು ಕಳುಹಿಸಿದ್ದು, ಇದು ಅತ್ಯಂತ ಕೆಳಕಕ್ಷೆಯನ್ನು ಪ್ರವೇಶಿಸಿದೆ. ಇದೊಂದು ಅತ್ಯಂತ ಸವಾಲಿನ ಕಾರ್ಯವಾಗಿದ್ದು, ಬಹು ದೊಡ್ಡ ಯಶಸ್ಸು ಎಂಬುದಾಗಿ ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಎರಡನೆಯದಾಗಿ, ವೈಜ್ಞಾನಿಕ ಉಪಕರಣಗಳು ಯಾವುದೇ ತಡೆಯಿಲ್ಲದ ಕಾರ್ಯ ಎಸಗಿವೆ. ನಾಲ್ಕು ಲಕ್ಷ ಕಿಲೋಮೀಟರ್ ದೂರದಿಂದ ಮಾಹಿತಿ ಬಂದಿದ್ದು ಇವುಗಳನ್ನು ಚಿತ್ರಗಳ ಮೂಲಕ ಹಾಗೂ ಪರಮಾಣು ಲೆಕ್ಕಾಚಾರದ ಮೂಲಕ ಒಟ್ಟು ಮಾಡಲಾಗಿದೆ.
ಅಂತಹ ವಾತಾವರಣದಲ್ಲಿ ಬಾಹ್ಯಾಕಾಶ ನೌಕೆಯೊಂದು ಅಷ್ಟು ಸುದೀರ್ಘ ಕಾಲ ಉಳಿಯುವುದು ತಮಾಷೆಯ ಮಾತಲ್ಲ. ಇದಕ್ಕಾಗಿ ನೀವು ಇಸ್ರೋವನ್ನು ಶ್ಲಾಘಿಸಬೇಕು ಎಂಬುದಾಗಿ ವಿಜ್ಞಾನಿ ಹೇಳಿದ್ದಾರೆ.