ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟ ಅಧಿಕಾರಿಗಳ ವಿರುದ್ಧ ಕಟು ನುಡಿದ ಮೊಯ್ಲಿ (Veerappa Moily | Corrupt Civil Servants | Constitution)
 
ಲಂಚಕೋರ ಸರ್ಕಾರಿ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಸಂವಿಧಾನದ ಕೆಲವು ಕಾಯ್ದೆಗಳು ಅಡ್ಡಿಯಾಗಿವೆ ಎಂಬುದಾಗಿ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಭ್ರಷ್ಟರಿಗೆ ಶ್ರೀರಕ್ಷೆಯಾಗಿರುವ ಕಾಯ್ದೆಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದ್ದು, ಈ ಸಂಬಂಧ ಪ್ರಧಾನಿ ಅವರೊಂದಿಗೆ ತಾವು ಚರ್ಚೆ ನಡೆಸಿರುವುದಾಗಿಯೂ ಹೇಳಿದ್ದಾರೆ.

ಸಿಬಿಐ ಮತ್ತು ಅಪರಾಧಶಾಸ್ತ್ರ ಹಾಗೂ ವಿಧಿವಿಜ್ಞಾನ ರಾಷ್ಟ್ರೀಯ ಸಂಸ್ಥೆ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ 'ಭ್ರಷ್ಟಾಚಾರ ಅಪರಾಧದ ವಿರುದ್ಧ ಹೋರಾಟ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಮೊಯ್ಲಿ, "ಭ್ರಷ್ಟ ಅಧಿಕಾರಿಗಳ ಕುರಿತಾದ 311ನೇ ವಿಧಿಯನ್ನು ಮರು ಪರಿಶೀಲನೆ ಮಾಡಲು ಚಿಂತನೆ ನಡೆಸಲಾಗಿದೆ. ಸನಾತನಂ ಸಮಿತಿ ಕೂಡಾ ಸಂವಿಧಾನದ 311ನೇ ವಿಧಿಯು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೊಂದರೆಯಾಗಿದೆ ಎನ್ನುವ ವರದಿ ನೀಡಿತ್ತು" ಎಂದು ಹೇಳಿದ್ದಾರೆ.

ಸಂವಿಧಾನದ 311ನೇ ವಿಧಿಯು ಸರ್ಕಾರಿ ಅಧಿಕಾರಿಗಳಿಗೆ ಕೆಲವು ಹಕ್ಕುಗಳು ಮತ್ತು ರಕ್ಷಣೆಯ ಅನುಕೂಲಗಳನ್ನು ನೀಡುತ್ತದೆ. ಕಾನೂನು ಜಾರಿ ಸಂಸ್ಥೆಗಳು ಅದನ್ನೇ ಬಳಸಿಕೊಂಡು ಭ್ರಷ್ಟ ಅಧಿಕಾರಿಗಳ ವಿಚಾರಣೆ ವಿಳಂಬವಾಗುವಂತೆ ನೋಡಿಕೊಂಡು ಅವರಿಗೆ ‘ರಕ್ಷಣೆ’ ನೀಡುತ್ತಿವೆ ಎಂದು ವೀರಪ್ಪ ಮೊಯ್ಲಿ ದೂರಿದರು. ಇದೇವೇಳೆ ಸಂವಿಧಾನದ 311 ಮತ್ತು 310ನೇ ವಿಧಿಗಳನ್ನು ರದ್ದು ಮಾಡಿ 309ನೇ ವಿಧಿಯಲ್ಲೇ ಸುಧಾರಣಾ ಅಂಶಗಳನ್ನು ಅಡಕಗೊಳಿಸಿ ನೂತನ ಶಾಸನ ರಚಿಸಬಹುದು ಎಂದು ಅವರು ಸಲಹೆ ಮಾಡಿದರು.

ಸರ್ಕಾರದ ವಿವಿಧ ಅಂಗಗಳು ತಮ್ಮಲ್ಲಿನ ಲೋಪ ಮುಚ್ಚಿಕೊಳ್ಳಲು ಮತ್ತೊಂದು ಸರ್ಕಾರಿ ಸಂಸ್ಥೆಯ ಮೇಲೆ ಗೂಬೆ ಕುರಿಸುತ್ತವೆ ಎಂದು ಮೊಯ್ಲಿ ವಿಷಾದ ವ್ಯಕ್ತಪಡಿಸಿದರು.

ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿಚಾರಣೆಗೆ ನಮ್ಮ ವ್ಯವಸ್ಥೆಯಲ್ಲಿರುವ ಅಡೆತಡೆಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಬಾಲಕೃಷ್ಣನ್ ಅವರು ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ