ವೆಚ್ಚ ಕಡಿತ ಮಾಡಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಕ್ಕೆ ಬದ್ಧತೆ ಸೂಚಿಸುವ ಸುಳಿವು ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಇನ್ನು ಮುಂದೆ ಖಾಸಗಿ ವಿಮಾನದಲ್ಲಿ ವಿದೇಶ ಪ್ರವಾಸ ಮಾಡುವುದಿಲ್ಲ ಎಂದು ಭಾನುವಾರ ಹೇಳಿದ್ದಾರೆ.
"ಇನ್ನು ಮುಂದೆ ವಿದೇಶ ಪ್ರವಾಸಕ್ಕೆ ತೆರಳುವ ವೇಳೆ ಖಾಸಗಿ ವಿಮಾನ ಬಳಸುವುದಿಲ್ಲ. ಅಲ್ಲದೇ ಬಿಸಿನೆಸ್ ಕ್ಲಾಸ್‌ನಲ್ಲಿಯೂ ಪ್ರಯಾಣಿಸುವುದಿಲ್ಲ. ವಿದೇಶ ಪ್ರವಾಸದ ನಿಯೋಗವನ್ನು ಮೂರು ಮಂದಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ" ಎಂದು ಕೃಷ್ಣ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರ, ರಕ್ಷಣೆ ಹಾಗೂ ಗೃಹ ಸಚಿವರುಗಳಿಗೆ 14 ಆಸನಗಳುಳ್ಳ ಎಂಬ್ರೇರ್ ವಿಮಾನದಲ್ಲಿ ವಿದೇಶ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ. ಕೃಷ್ಣ, ಮಂಗಳವಾರದಿಂದ ಬೆಲೂರಸ್ ಹಾಗೂ ಟರ್ಕ್‌ಮೆನಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಖಾಸಗಿ ವಿಮಾನದ ಬದಲಿಗೆ ನಾಗರಿಕ ವಿಮಾನದಲ್ಲಿಯೇ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲದೇ ಮುಂದಿನ ತಿಂಗಳಿನಲ್ಲಿ ಮಸ್ಕತ್ ಪ್ರವಾಸಕ್ಕೂ ಖಾಸಗಿ ವಿಮಾನ ಬಳಸುವುದಿಲ್ಲ ಎಂದು ಕೃಷ್ಣ ಹೇಳಿದ್ದಾರೆ.
ತಮಗೆ ನೀಡಿರುವ ಸರ್ಕಾರಿ ಬಂಗಲೆಯು ನವೀಕರಣಗೊಳ್ಳುತ್ತಿರುವುದರಿಂದ ಪಂಚತಾರಾ ಹೋಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಕ್ಕೆ ಕೃಷ್ಣ ಅವರು ಭಾರೀ ಟೀಕೆ ಎದುರಿಸಿದ್ದಾರೆ. ಪಂಚತಾರ ಹೋಟೇಲಿನಲ್ಲಿ ಪ್ರೆಸಿಡೆಂಟ್ ಸೂಟ್ ರೂಮ್‌ನಲ್ಲಿ ತಂಗಿದ್ದ ಕೃಷ್ಣ ದಿನ ಒಂದರ ಲಕ್ಷರೂಪಾಯಿಗೂ ಅಧಿಕ ಹಣವನ್ನು ವ್ಯಯಿಸುತ್ತಿರುವುದು ತೀವ್ರ ಟೀಕೆಗೆ ಒಳಗಾಗಿತ್ತು. ಆದರೆ ಇದು ತನ್ನ ಖಾಸಗಿ ವ್ಯವಸ್ಥೆ ಎಂಬುದಾಗಿ ಕೃಷ್ಣ ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಶಶಿ ಥರೂರ್ ಅವರೂ ಸಹ ಪಂಚ ತಾರಾ ಹೋಟೇಲಿನಲ್ಲಿ ತಂಗುತ್ತಿದ್ದು, ಅವರ ವಿರುದ್ಧವೂ ಟೀಕೆ ವ್ಯಕ್ತವಾಗಿತ್ತು.