ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನ ಯಾರ್ಡ್‌ ಬದಲಿಗೆ ಇಂಚಿಂಚಾಗಿ ಜಾಗ ಕಬಳಿಸುತ್ತಿದೆ (China | India | international border | Karakoram range)
 
ಭಾರತ-ಚೀನ ನಡುವೆ 1962ರಲ್ಲಿ ಏರ್ಪಟ್ಟಿರುವ ಗಡಿ ಒಪ್ಪಂದದ ಬಳಿಕ ಇದೀಗ ಮೊದಲ ಬಾರಿ ಲಡಾಕ್ ಸೆಕ್ಟರ್‌ನ ಕಾರಕೋರಂ ವ್ಯಾಪ್ತಿಯ ಗಡಿರೇಖೆಯುದ್ದಕ್ಕೆ ಅದು ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂಬುದಾಗಿ ಹೇಳಿರುವ ಜಮ್ಮು ಕಾಶ್ಮೀರ ಸರ್ಕಾರದ ವರದಿಯೊಂದು, ಚೀನವು ಭಾರತದ ಭೂಮಿಯನ್ನು ಯಾರ್ಡ್(ಮೂರು ಅಡಿ)ಗಳ ಬದಲಿಗೆ ಅಂಗುಲಗಳಲ್ಲಿ ಕಬಳಿಸುತ್ತಿದೆ ಎಂದು ದೂರಿದೆ.

ಭಾರತೀಯ ಸೇನೆಯ ಚಲನವಲನಗಳ ಮೇಲೆ ಕೆಮರಾ ಕಣ್ಗಾವಲು ಇರಿಸಲು ಅಥವಾ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವ ಸಲುವಾಗಿ ಚೀನ ಸೇನೆ ಪಿಎಲ್‌ಎ ಕಾರಕೋರಂ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ ಹಾಗೂ ಚೀನದ ಕ್ಸಿಂಜಿಯಾಂಗ್ ಸ್ವಾಯತ್ತ ಪ್ರಾಂತ್ಯದ ನಡುವಣ ಗಡಿಯಲ್ಲಿ ಕಾರಕೋರಂ ಪಾಸ್ ಇದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಿಯಾಚಿನ್ ಗ್ಲೇಸಿಯರ್ ಮೇಲೆ ಹಿಡಿತ ಸಾಧಿಸುವ ಕುರಿತ ವಿವಾದದಲ್ಲಿ ಅದು ಭೌಗೋಳಿಕವಾಗಿ ಪ್ರಮುಖ ಪಾತ್ರ ವಹಿಸಿತ್ತು.

1972ರ ಭಾರತ ಪಾಕಿಸ್ತಾನ ನಡುವಿನ ಶಿಮ್ಲಾ ಒಪ್ಪಂದದ ಬಳಿಕ ಈ ಪರಿಸ್ಥಿತಿ ಸೃಷ್ಟಿಯಾಗಿದ್ದು, ಒಪ್ಪಂದದಲ್ಲಿ ಕಾರಕೋರಂ ಪಾಸ್ ಗಡಿನಿಯಂತ್ರಣ ರೇಖೆಯಲ್ಲಿ ಕದನವಿರಾಮ ಘೋಷಣೆಗಳನ್ನು ಉಲ್ಲೇಖಿಸಲು ಸಾಧ್ಯವಾಗಿರಲಿಲ್ಲ. ಪಾಸ್‌ನ ಪಶ್ಚಿಮ ಭೂಭಾಗವನ್ನು ಚೀನ-ಭಾರತ ಪಾಕಿಸ್ತಾನ ನಡುವಣ ಗಡಿಕೇಂದ್ರವೆಂದು ಹೆಸರಿಸಲಾಗಿತ್ತು.

ಏತನ್ಮಧ್ಯೆ, ಕಾರಕೋರಂನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬ ವರದಿಯನ್ನು ಸೇನೆ ತಳ್ಳಿಹಾಕಿದೆ. ಆದರೆ ಚೀನ ವ್ಯಾಪ್ತಿಯ ಈ ಪ್ರದೇಶದಲ್ಲಿ ನೆಲ ಅಗೆಯುವ ಕೆಲಸ ನಡೆದಿದೆ. ಸಿಮೆಂಟ್ ಬಂಕರ್‌ಗಳನ್ನು ನಿರ್ಮಿಸಿರುವ ಯಾವುದೇ ಮಾಹಿತಿ ಇಲ್ಲ ಎಂದು ಅದು ಹೇಳಿದೆ.

ಕಾಶ್ಮೀರ ಸರ್ಕಾರದ ವರದಿಯಲ್ಲಿ ಲಡಾಕ್‌ನ ಕೆಲವು ಭಾಗವನ್ನು ಚೀನ ಅತಿಕ್ರಮಿಸಿರುವ ಕುರಿತು ಬೆಳಕು ಚೆಲ್ಲಲಾಗಿದೆ. ಈ ಪ್ರದೇಶದ ಮೂಲನಿವಾಸಿಗಳನ್ನು ಚೀನ ಸೇನೆ ಬೆದರಿಸಿ ಹೊರಗಟ್ಟಿದೆ ಎಂಬುದಾಗಿ ಮಾಜಿ ಉಪವಿಭಾಗೀಯ ಮ್ಯಾಜೆಸ್ಟ್ರೀಟ್ ತ್ಸೆರಿಂಗ್ ನೋರ್ಬು ಅವರು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ. ದೋಕ್‌‍ಬಗ್ ವ್ಯಾಪ್ತಿಯಲ್ಲಿ ಚೀನದ ಅತಿಕ್ರಮಣದ ಬಗ್ಗೆ ತನಿಖೆ ನಡೆಸಲು ಕಾಶ್ಮೀರ ಸರ್ಕಾರವು ನೋರ್ಬುರನ್ನು ನೇಮಿಸಿತ್ತು.

ಇಲ್ಲಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವ ಮುನ್ನ ಲಡಾಕ್‌ನಲ್ಲಿ ಚೀನವು, ಭಾರತ-ಚೀನ ಅಂತಾರಾಷ್ಟ್ರೀಯ ಗಡಿರೇಖೆಯನ್ನು ಉಲ್ಲಂಘಿಸಿದ್ದು ಮಾತ್ರವಲ್ಲದೆ, ಅತಿಕ್ರಮಿತ ಪ್ರದೇಶದಲ್ಲಿರುವ ಬಂಡೆಗಳ ಮೇಲೆ ಚೀನದ ಹೆಸರನ್ನು ಬರೆದಿತ್ತು.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ