ಗುಜರಾತ್ ಉಪಚುನಾವಣೆ: ಎದ್ದ ಬಿಜೆಪಿ (5), ಬಿದ್ದ ಕಾಂಗ್ರೆಸ್ (2)
ಅಹಮದಾಬಾದ್, ಸೋಮವಾರ, 14 ಸೆಪ್ಟೆಂಬರ್ 2009( 14:03 IST )
ಸೆಪ್ಟೆಂಬರ್ 10ರಂದು ಉಪ ಚುನಾವಣೆ ನಡೆದ 7 ಕ್ಷೇತ್ರಗಳಲ್ಲಿ ಐದನ್ನು ಆಡಳಿತಾರೂಢ ಬಿಜೆಪಿ ಗೆದ್ದುಕೊಂಡಿದ್ದು, ಕಾಂಗ್ರೆಸ್ ಕೇವಲ 2 ಸ್ಥಾನ ಗಳಿಸಿ ಹಿನ್ನಡೆ ಅನುಭವಿಸಿದೆ. ದಾಂತಾ ಅಸೆಂಬ್ಲಿ ಕ್ಷೇತ್ರದ ಮತ ಎಣಿಕೆ ಮುಂದುವರಿಯುತ್ತಿದ್ದು, 14 ಸುತ್ತುಗಳ ಎಣಿಕೆಯ ಬಳಿಕ ಬಿಜೆಪಿ ಅಭ್ಯರ್ಥಿ ವಸಂತ್ ಭಟೋಲ್ ಅವರು ಸುಮಾರು 3000 ಮತಗಳ ಅಂತರದಿಂದ ಮುಂದಿದ್ದರು.
ಲೋಕಸಭೆ ಚುನಾವಣೆಯಲ್ಲಿ ಮತ್ತು ಆ ಬಳಿಕ ಜುನಾಗಢ ಸ್ಥಳೀಯಾಡಳಿತ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ, ಉಪ ಚುನಾವಣೆಗೆ ತೀರಾ ಅಬ್ಬರವಿಲ್ಲದೆಯೇ ಪ್ರಚಾರ ನಡೆಸಿತ್ತಾದರೂ, ಚುನಾವಣೆಯಲ್ಲಿ ದೆಹ್‌ಗಾಂವ್, ಜಸ್ಡಾನ್ ಮತ್ತು ಚೋತಿಲಾ ಹಾಗೂ ಸಾಮಿ ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಟಿಕೆಟಿನಲ್ಲಿ ಸಾಮಿ ಕ್ಷೇತ್ರದಲ್ಲಿ ಗೆದ್ದಿದ್ದ ಹಾಲಿ ಬಿಜೆಪಿ ಅಭ್ಯರ್ಥಿ ಭಾವಸಿಂಗ್ ರಾಥೋಡ್, ಬಿಜೆಪಿಗೆ ಪಕ್ಷಾಂತರವಾಗಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ಕೂಡ ಬಿಜೆಪಿಯ ಭದ್ರಕೋಟೆಯಾಗಿದ್ದ ಸೌರಾಷ್ಟ್ರದ ಕೋಡಿನಾರ್ ಕ್ಷೇತ್ರವನ್ನು ಬಿಜೆಪಿಯಿಂದ ಕಿತ್ತುಕೊಂಡಿದ್ದರೆ, ತನ್ನ ಭದ್ರಕೋಟೆ ಧೊರಾಜಿ ಕ್ಷೇತ್ರವನ್ನು ಉಳಿಸಿಕೊಂಡಿದೆ.
ಚುನಾವಣೆ ನಡೆದ ಸಂದರ್ಭ ಏಳರಲ್ಲಿ ಆರೂ ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲಿದ್ದವು. ಬಿಜೆಪಿಯ ಕೈಯಲ್ಲಿ ಕೋಡಿನಾರ್ ಕ್ಷೇತ್ರ ಮಾತ್ರವೇ ಇತ್ತು.
ಐದು ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾಗಿದ್ದರು, ಒಂದು ಕ್ಷೇತ್ರದಲ್ಲಿ ಶಾಸಕರ ಸಾವಿನಿಂದಾಗಿ ಸ್ಥಾನ ತೆರವಾಗಿತ್ತು ಮತ್ತು ಸಾಮಿ ಎಂಬ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಕಾಂಗ್ರೆಸ್ ಶಾಸಕ, ರಾಥೋಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಚಾರದಲ್ಲಿ ಭಾಗವಹಿಸದೇ ಇದ್ದದ್ದು ವಿಶೇಷ.