ಪೊಲೀಸ್ ಅಧಿಕಾರಿಗಳನ್ನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆ ವರ್ಗಾವಣೆ ಮಾಡುವ ರಾಜ್ಯಗಳ ಪೊಲೀಸ್ ಮುಖ್ಯಸ್ಥರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಗೃಹಸಚಿವ ಪಿ.ಚಿದಂಬರಂ ಅವರು ಇದರಿಂದಾಗಿ ಪೊಲೀಸಧಿಕಾರಿಗಳು ಫುಟ್‌ಬಾಲ್‌ಗಳಂತಾಗಿದ್ದಾರೆ ಎಂದು ಹೇಳಿದ್ದಾರೆ.
"ಹುದ್ದೆ ಮತ್ತು ಅಧಿಕಾರಿಗೆ ಆಗುವ ಹಾನಿಯನ್ನು ಪರಿಗಣಿಸದೆ ಹಲವು ಪೊಲೀಸ್ ಅಧಿಕಾರಿಗಳನ್ನು ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಫುಟ್ಬಾಲ್‌ಗಳಂತೆ ಒದೆಯಲಾಗುತ್ತಿರುವುದು ಅತ್ಯಂತ ವಿಷಾದನೀಯ ವಿಚಾರವಾಗಿದೆ" ಎಂದು ಅವರು ಹೇಳಿದ್ದಾರೆ. ಅವರು ಗುಪ್ತಚರ ಸಂಸ್ಥೆ ಆಯೋಜಿಸಿರುವ ಮೂರುದಿನಗಳ ಡಿಜಿ ಹಾಗೂ ಐಜಿಪಿಗಳ ಮೂರು ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಭದ್ರತೆ ಕುರಿತಂತೆ ರಾಜ್ಯ ಸರ್ಕಾರಗಳ ಜಡ್ಡುಗಟ್ಟಿದ ಮನೋಭಾವವನ್ನು ಮತ್ತಷ್ಟು ಟೀಕಿಸಿದ ಅವರು ಪಾರದರ್ಶಕವಲ್ಲದ ನೇಮಕಾತಿ ಪ್ರಕ್ರಿಯೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯಂತರ ವರ್ಗಾವಣೆಗಳು ಇದನ್ನು ಪ್ರತಿಫಲಿಸುತ್ತದೆ ಎಂದು ಹೇಳಿದರು.
"ಜಿಲ್ಲಾ ಎಸ್ಪಿಯ ಸರಾಸರಿ ಅಧಿಕಾರ ಅವಧಿ ಎಷ್ಟು? ಠಾಣಾ ಮುಖ್ಯಾಧಿಕಾರಿಯ ಸರಾಸರಿ ಅಧಿಕಾರ ಅವಧಿ ಎಷ್ಟು? ರಾಜ್ಯ ಸರ್ಕಾರಗಳು ಇಚ್ಚೆಬಂದಂತೆ ನೇಮಕಾತಿಗಳು ಮತ್ತು ವರ್ಗಾವಣೆಯನ್ನು ಮಾಡುವ ವೇಳೆ ನಿವ್ಯಾಕೆ ಮೌನವಾಗಿರುತ್ತೀರಿ? ಈ ಪ್ರಶ್ನೆಗಳಿಗೆ ನಿಮ್ಮ ಹೃದಯದಿಂದ ಉತ್ತರಿಸಿ" ಎಂಬುದಾಗಿ ಚಿದಂಬರಂ ನುಡಿದರು.
ನೇಮಕಾತಿ ಪ್ರಕ್ರಿಯೆಯನ್ನು ಮತ್ತು ಅಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಹಾಗೂ ಸಮಯಮಿತಿಗೆ ಒಳಪಡಿಸುವ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ಇಚ್ಚೆಯಿಲ್ಲ ಎಂದು ಅವರು ದೂರಿದರು.
"ಒಂದು ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿ ನಿಮ್ಮ ಅಧಿಕಾರಿಗಳ ಪರವಾಗಿ ಮತ್ತು ನೀವು ರಕ್ಷಿಸಬೇಕಾದ ಜನರ ಪರವಾಗಿ ಧ್ವನಿ ಎತ್ತಬೇಕಾಗಿರುವುದು ನಿಮ್ಮ ಕರ್ತವ್ಯವಲ್ಲವೇ ಎಂಬುದಾಗಿ ರಾಜ್ಯಗಳ ಪೊಲೀಸ್ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದ ಅವರು "ಮಾತನಾಡುವ ಕರ್ತವ್ಯವಿದ್ದಾಗ, ಮೌನವೂ ದಂಡನೀಯ" ಎಂಬ ಪ್ರಸಿದ್ಧ ನ್ಯಾಯಾಧೀಶರ ಮಾತುಗಳನ್ನು ಉಲ್ಲೇಖಿಸಿದರು.
ಇದೇ ವೇಳೆಗೆ, ಪೊಲೀಸ್ ಇಲಾಖೆಗೆ ಸಾಕಷ್ಟು ಹಣಕಾಸು ಲಭಿಸುತ್ತಿಲ್ಲ ಎಂದ ಅವರು ಸಾಕಷ್ಟು ನಿಧಿಯನ್ನು ಒದಗಿಸುವಂತೆ ರಾಜ್ಯಸರ್ಕಾರಗನ್ನು ಒತ್ತಾಯಿಸಿದರು. ಇತರ ಯೋಜನೆಗಳಿಗೆ ಹಣಕಾಸು ಹಂಚಿದ ಬಳಿಕ ಉಳಿದಿರುವುದನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತದೆ ಎಂದು ನುಡಿದರು.
ಇದೇವೇಳೆ, ಗಡಿಯಾಚೆಗಿನ ಭಯೋತ್ಪಾದನೆಯೂ ಸಹ ತೀವ್ರ ಕಳವಳಕಾರಿ ವಿಚಾರವಾಗದೆ ಎಂದು ನುಡಿದರು. ಲಷ್ಕರ್-ಇ-ತೋಯ್ಬಾ ಹಾಗೂ ಜೈಶೆ-ಇ-ಮೊಹಮ್ಮದ್ ಸಂಘಟನೆಗಳು ಇನ್ನೂ ಕ್ರಿಯಾತ್ಮಕವಾಗಿದ್ದು, ಅವರುಗಳು ಹೊಸಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದಾಗಿ ಸಚಿವರು ಆತಂಕ ವ್ಯಕ್ತಪಡಿಸಿದರು.