ಅಮರಿಕ ನೀಡಿದ ಸಹಾಯಧನವನ್ನು ಭಾರತದ ವಿರುದ್ಧ ಬಳಸಲಾಗಿರುವುದು ಹೌದು ಎಂಬುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಒಪ್ಪಿಕೊಂಡಿರುವ ಒಂದು ದಿನದ ಬಳಿಕ, ಅಮೆರಿಕ ತಾನು ಪಾಕಿಸ್ತಾನಕ್ಕೆ ನೀಡಿರುವ ಸಹಾಯದ ಕುರಿತು ಲಕ್ಷ್ಯವಿಡಬೇಕು ಎಂಬುದಾಗಿ ಭಾರತ ಸಲಹೆ ನೀಡಿದೆ.
"ಭಯೋತ್ಪಾದನೆಯ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಸಹಾಯ ನೀಡುವ ರಾಷ್ಟ್ರಗಳನ್ನು ನಾವು ಬೆಂಬಲಿಸುತ್ತೇವೆ. ಆದರೆ ಇಂತಹ ಸಹಾಯಗಳು ನಮ್ಮ ವಿರುದ್ಧ ತಿರುಗುತ್ತವೆ ಎಂಬುದನ್ನು ನಾವು ನಿರೀಕ್ಷಿಸುವುದಿಲ್ಲ" ಎಂಬುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಶಶಿ ಥರೂರ್ ಹೇಳಿದ್ದಾರೆ.
ಮುಷರಫ್ ಹೇಳಿಕೆಯಿಂದೇನೂ ಭಾರತಕ್ಕೆ ಆಶ್ಚರ್ಯವಾಗಲಿಲ್ಲ ಎಂದು ಹೇಳಿದ ಥರೂರ್ "ಅಮೆರಿಕವು ತಾನು ಪಾಕಿಸ್ತಾನಕ್ಕೆ ನೀಡುವ ನೆರವಿನ ಕುರಿತು ನಿಗಾ ಇರಿಸಬೇಕು. ಮುಷರಫ್ ಹೇಳಿಕೆಯು, ಅಮೆರಿಕ ಸಹಾಯವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಭಾರತದ ನಿಲುವನ್ನು ದೃಢಪಡಿಸಿದೆ" ಎಂಬುದಾಗಿ ಹೇಳಿದ್ದಾರೆ.
ತನ್ನ ಆಡಳಿತಾವಧಿಯಲ್ಲಿ ಅಮರಿಕಾದ ಸಹಾಯವನ್ನು ಭಾರತದ ವಿರುದ್ಧ ಬಳಸಿರುವುದಾಗಿ ಮುಷರಫ್ ಭಾನುವಾರ ಹೇಳಿದ್ದರು. ಪಾಕಿಸ್ತಾನದ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಂಡಿರುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಪ್ರಸಕ್ತ ಅಧಿಕಾರದಲ್ಲಿರುವ ಪಾಕಿಸ್ತಾನ ಸರ್ಕಾರವು ಮುಷರಫ್ ಹೇಳಿಕೆಯನ್ನು ಅಲ್ಲಗಳೆದಿದೆ.