ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಸ್ಟರ್ ಅಭಯ ಸಾವು: ನಾರ್ಕೋ ಪರೀಕ್ಷಾ ವರದಿಗೆ ನಿರ್ಬಂಧ (Sister Abhaya Murder | Narco test | Kottayam | CBI)
 
17 ವರ್ಷಗಳಷ್ಟು ಹಳೆಯ ಸಿಸ್ಟರ್ ಅಭಯ ಕೊಲೆ ಪ್ರಕರಣ ಬಹುತೇಕ ಭೇದಿಸಿದಂತಾಗಿದೆ. ಆರೋಪಿಗಳಾದ ಇಬ್ಬರು ಪಾದ್ರಿಗಳು ಹಾಗೂ ಒಬ್ಬ ಸಿಸ್ಟರ್ ನಾರ್ಕೋ ಅನಾಲಿಸಿಸ್ ಪರೀಕ್ಷೆ ಸಂದರ್ಭ ತಪ್ಪೊಪ್ಪಿಕೊಂಡಿದ್ದು, ಮಲಯಾಳಂ ಟೆಲಿವಿಷನ್ ಚಾನೆಲ್‌ಗಳು ಸೋಮವಾರ ಈ ಪರೀಕ್ಷೆಯ ತುಣುಕುಗಳನ್ನು ಪ್ರದರ್ಶಿಸಿದ ಬಳಿಕ, ಸಿಡಿಯಲ್ಲಿರುವ ವಿಷಯವನ್ನು ಬಹಿರಂಗಪಡಿಸದಂತೆ ನ್ಯಾಯಾಲಯವೊಂದು ಪತ್ರಿಕೆಗಳು ಮತ್ತು ಟೆಲಿವಿಷನ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿತು.

ಸಿಸ್ಟರ್ ಅಭಯರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಹೊತ್ತಿರುವ ಆರೋಪಿಗಳಾದ ಫಾದರ್ ಥೋಮಸ್ ಕೊಟ್ಟೂರ್, ಜೋಸ್ ಪುತ್ರಿಕಯಿಲ್ ಮತ್ತು ಸಿಸ್ಟರ್ ಸೆಫಿ ಅವರು, ಈ ವರ್ಷಾರಂಭದಲ್ಲಿ ನಡೆದ ನಾರ್ಕೋ ಅನಾಲಿಸಿಸ್ ಪರೀಕ್ಷೆ ಸಂದರ್ಭ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಿಡಿಯ ತುಣುಕುಗಳನ್ನು ಮಲಯಾಳಂ ಚಾನೆಲ್‌ಗಳು ಸೋಮವಾರ ಪ್ರಸಾರ ಮಾಡುತ್ತಿದ್ದವು.

1992ರಲ್ಲಿ ಕೊಟ್ಟಾಯಂನ ಸೈಂಟ್ ಪಾಯಸ್ ಕಾನ್ವೆಂಟ್‌ನಲ್ಲಿ ಸಿಸ್ಟರ್ ಅಭಯಳ ಶವ ಪತ್ತೆಯಾಗಿತ್ತು. ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿ ಹಾಕಿದ್ದರು. ಆದರೆ, ಬಳಿಕ ಈ ಕೇಸನ್ನು ಕೇಂದ್ರೀಯ ತನಿಖಾ ಮಂಡಳಿ - ಸಿಬಿಐಗೆ ವಹಿಸಲಾಯಿತು. ಸಿಬಿಐ ಮೂರು ಬಾರಿ ಪ್ರಕರಣವನ್ನು ಮುಚ್ಚಿ ಬಿಟ್ಟಿತ್ತು. ಆದರೆ ಕೇರಳ ಹೈಕೋರ್ಟು ಈ ವರದಿಗಳನ್ನು ಒಪ್ಪಲು ನಿರಾಕರಿಸಿ, ಮತ್ತಷ್ಟು ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು.

ಕೋರ್ಟ್ ನಿರ್ದೇಶನದಂತೆ ಸಿಬಿಐ ದೆಹಲಿ ಘಟಕದಿಂದ ತನಿಖೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಸಿಬಿಐ ಕೊಚ್ಚಿ ಘಟಕವು, ಇಬ್ಬರು ಪಾದ್ರಿಗಳು ಹಾಗೂ ಒಬ್ಬ ಸಿಸ್ಟರ್‌ಳನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬಂಧಿಸಿ, ಜುಲೈ 17ರಂದು ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ದಾಖಲಿಸಿತ್ತು.

ನಾರ್ಕೋ ಮತ್ತು ಪಾಲಿಗ್ರಾಫ್ ಪರೀಕ್ಷೆಗಳೂ ಸೇರಿದಂತೆ ಸಿಬಿಐ ಹಲವಾರು ವೈಜ್ಞಾನಿಕ ಪರೀಕ್ಷೆಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿತ್ತು. ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ಆದರೆ, ಇತ್ತೀಚೆಗೆ ನಡೆಸಲಾಗಿದ್ದ ನಾರ್ಕೋ ಪರೀಕ್ಷೆಯಲ್ಲಿರುವ ಅಂಶಗಳು ಸೋಮವಾರ ಮಲಯಾಳಂ ಚಾನೆಲ್‌ಗಳಲ್ಲಿ ಬಹಿರಂಗವಾಗುವ ಮೂಲಕ ಭಾರೀ ಕೋಲಾಹಲಕ್ಕೆ ನಾಂದಿ ಹಾಡಿವೆ. ಚರ್ಚುಗಳಲ್ಲಿ ಅನ್ಯಾಯ, ಅನಾಚಾರಗಳು ನಡೆಯುತ್ತಿರುವ ಕುರಿತು ಸಾಕಷ್ಟು ಆರೋಪ ಪ್ರತ್ಯಾರೋಪಗಳು ಕೇಳಿಬಂದಿದ್ದು, ಇದು ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ